548

ಎದೆಯಾಳದ ಗಾಯಕ್ಕೊಮ್ಮೆ,
ಮುಲಾಮು ಹಚ್ಚಬೇಕೆಂದಿರುವೆ…
ಸಹಕರಿಸೋ ಕರಗಳಿದ್ದರೆ,
ನನಗೊಮ್ಮೆ ತಿಳಿಸಿಬಿಡಿ…!!!

ಮನದಾಳದ ನೋವುಗಳ
ಮರೆತು ಬಾಳಬೇಕೆಂದಿರುವೆ…
ಹಣೆಬರಹವ ತಿದ್ದುವವರಿದ್ದರೆ,
ನನಗೊಮ್ಮೆ ತಿಳಿಸಿಬಿಡಿ…!!!

ಕಾಡುವ ಕನಸಿಗೊಮ್ಮೆ,
ವಿರಾಮ ನೀಡಬೇಕೆಂದಿರುವೆ…
ಕಾಲವ ನಿಲ್ಲಿಸುವವರಿದ್ದರೆ,
ನನಗೊಮ್ಮೆ ತಿಳಿಸಿಬಿಡಿ…!!!

ನೆನಪುಗಳ ಕೊನೆಗಾಣಿಸಲು,
ಸುಪಾರಿ ಕೊಡಬೇಕೆಂದಿರುವೆ…
ರಿಪೇರಿ ಮಾಡುವವರಿದ್ದರೆ,
ನನಗೊಮ್ಮೆ ತಿಳಿಸಿಬಿಡಿ…!!!

ಬೇನಾಮಿ ಸಮಯಕ್ಕೊಮ್ಮೆ,
ಭಿನ್ನಹ ಮಾಡಬೇಕೆಂದಿರುವೆ…
ಭಾವನೆಗಳಿಗೆ ಬಣ್ಣ ಹಚ್ಚುವವರಿದ್ದರೆ,
ನನಗೊಮ್ಮೆ ತಿಳಿಸಿಬಿಡಿ…!!!

ಸುದ್ಧಿಯ ಮಾಡದೆಯೇ,
ಬುದ್ಧಿಯ ಕಲಿಯಬೇಕೆಂದಿರುವೆ…
ವಿಧಿಯ ಬದಲಾಯಿಸುವವರಿದ್ದರೆ,
ನನಗೊಮ್ಮೆ ತಿಳಿಸಿಬಿಡಿ…!!!

ಶಾಂತಿ-ಸಹೋದರತೆಯನು,
ಜಗದಗಲ ಹರಡಬೇಕೆಂದಿರುವೆ…
ಕಾಂತಿಯುಕ್ತ ಕಣ್ಗಳಿದ್ದರೆ,
ನನಗೊಮ್ಮೆ ತಿಳಿಸಿಬಿಡಿ…!!!

ಜಂಜಾಟಗಳ ಜೊತೆಯಲಿ,
ಜೋಕಾಲಿ ಆಡಬೇಕೆಂದಿರುವೆ…
ಜತನವೆಂಬ ಮರವೊಂದಿದ್ದರೆ,
ನನಗೊಮ್ಮೆ ತಿಳಿಸಿಬಿಡಿ…!!!

ಬದುಕೆಂಬೋ ಬಂಡಿಯಲಿ,
ಬಹುದೂರ ಚಲಿಸಬೇಕೆಂದಿರುವೆ…
ಭರವಸೆಯೆಂಬ ಚಾಲಕನಿದ್ದರೆ,
ದಯವಿಟ್ಟು ತಿಳಿಸಿಬಿಡಿ…!!!

ಕವಿ: ಹಕ್ಕಿ ಬಜಪೆ

IMG-20180101-WA0141

By suddi9

Leave a Reply

Your email address will not be published. Required fields are marked *