ಬಂಟ್ವಾಳ: ತಾಲ್ಲೂಕನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಎಂಬಲ್ಲಿ ಮನೆಯೊಂದರ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಅಪಾರ ನಷ್ಟ ಮತ್ತು ಮನೆಯೊಳಗಿದ್ದ ಇಬ್ಬರು ಸಣ್ಣಪುಟ್ಟ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
ಗಾಯಾಳುಗಳನ್ನು ಇಲ್ಲಿನ ನಿವಾಸಿ ಲೀಲಾ ಪೂಜಾರಿ ಮತ್ತು ಇವರ ಅಣ್ಣನ ಮಗ ನಿಶಾಂತ್ ಎಂದು ಗುರುತಿಸಲಾಗಿದೆ. ಇಲ್ಲಿನ ನಿವಾಸಿ ಲೀಲಾ ನಾರಾಯಣ ಪೂಜಾರಿ ಎಂಬವರು ಸೋಮವಾರ ಸಂಜೆ ಸಂಬಂಧಿಕರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಸಂಜೆ ಸುಮಾರು ಏಳೂವರೆ ಗಂಟೆಗೆ ಭಾರೀ ಗಾಳಿ ಮಳೆಯಾಗುತ್ತಿದ್ದಂತೆಯೇ ಮನೆ ಅಂಗಳದಲ್ಲಿದ್ದ ತೆಂಗಿನ ಮರವೊಂದು ದಿಢೀರನೆ ಮುರಿದು ಮನೆ ಮಾಡಿನ ಮೇಲೆ ಬಿದ್ದಿದೆ. ಇದರಿಂದಾಗಿ ಮನೆಯೊಳಗೆ ಕುಳಿತಿದ್ದ ನಾರಾಯಣ ಪೂಜಾರಿ ಅವರ ಸಹೋದರಿ ಲೀಲಾ ಮತ್ತು ನಿಶಾಂತ್ ಅವರ ತಲೆಗೆ ಹಂಚಿನ ತುಂಡು ರಬಸದಿಂದ ತಗುಲಿ ಗಾಯವಾಗಿದೆ. ಇದೇ ವೇಳೆ ಉಂಟಾದ ಭಾರೀ ಸದ್ದಿಗೆ ಧಾವಿಸಿ ಬಂದ ಸ್ಥಳೀಯರು ರಾತ್ರಿಯೇ ಅವರನ್ನು ಸಿದ್ಧಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವುದಾಗಿ ತಿಳಿಸಿದ್ದಾರೆ.
ರೂ 1.5ಲಕ್ಷ ನಷ್ಟ:
ಈ ನಡುವೆ ತೆಂಗಿನ ಮರ ಬಿದ್ದ ಪರಿಣಾಮ ಮನೆ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಾಡಿನ ಮರ, ರೀಪು ಮತ್ತಿತರ ಸಾಮಾಗ್ರಿ ಮುರಿದು ಬಹುತೇಕ ಹೆಂಚು ಪುಡಿಯಾಗಿದೆ. ಇನ್ನೊಂದೆಡೆ ಮನೆಯಲ್ಲಿದ್ದ ಟೀವಿ, ಫ್ಯಾನ್ ಸಹಿತ ವಿದ್ಯುತ್ ತಂತಿ ಸಂಪೂರ್ಣ ಹಾನಿಗೀಡಾಗಿದೆ. ಇದರಿಂದಾಗಿ ಒಟ್ಟು ರೂ 1.5ಲಕ್ಷ ಮೊತ್ತದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಸದಸ್ಯೆ ನಿರುಪಮಾ ಎಸ್.ಭಂಡಾರಿ, ಶೋಭಾ ಚಿಂಗಲಚ್ಚಿಲ್, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ, ಗ್ರಾಮಕರಣಿಕ ವಿನೋದ್ ಕುಮಾರ್, ಸಹಾಯಕ ರಮೇಶ್ ಮತ್ತಿತರರು ಭೇಟಿ ನೀಡಿ ಪರಿಸೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.

