ಬಂಟ್ವಾಳ ತಾಲೂಕಿನ ಮೂಲರಪಟ್ಣ ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಈಜಲು ಹೋದ ಐವರು ಮಕ್ಕಳು ನೀರುಪಾಲಾದ ಘಟನೆ ಸೋಮವಾರ ಸಂಜೆ ನಡೆದಿದೆ. ಅಸ್ಲಾಮ್ ( 17), ರಮೂಜ್ (17), ಅಜಮಾತ್ (18), ಮುಬಾಶಿರ್ (17), ಸಮಾದ್ (17) ನೀರುಪಾಲಾದವರು. ಇವರಲ್ಲಿ ಮುಂಜಾನೆ ಸಮಾದ್ ಎಂಬಾತನ ಮೃತದೇಹ ಪತ್ತೆಯಾಗಿದೆ.
ಮಧ್ಯಾಹ್ನ ಮನೆಯಲ್ಲಿ ಮದುವೆಗೆ ಹೋಗುತ್ತೇವೆ ಎಂದು ಸುಳ್ಳು ಹೇಳಿ ಹೋಗಿದ್ದರು. ರಾತ್ರಿಯಾದರೂ ಬಾರದ ಕಾರಣ ಮನೆಯವರು ಹುಡುಕಾಟ ಶುರುಮಾಡಿದರು. ಈ ಸಂದರ್ಭ ಫಲ್ಗುಣಿ ನದಿ ಪಕ್ಕದಲ್ಲಿ ಪತ್ತೆಯಾದ ಮಕ್ಕಳ ವಸ್ತ್ರ, ಮೊಬೈಲ್ ಪತ್ತೆಯಾಯಿತು. ಇದರಿಂದ ಆತಂಕಿತರಾದ ಮನೆಯವರು, ಗ್ರಾಮಸ್ಥರು ಹುಡುಕಾಟ ಆರಂಭಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಬ್ಬಾತನ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ಮುಂದುವರಿದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





