ಬಂಟ್ವಾಳ: ಇಲ್ಲಿನ ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿಗೆ ಸರ್ಕಾರದಿಂದ ಪೂರೈಕೆಯಾಗಿರುವ ‘ಅನ್ನಭಾಗ್ಯ’ದ ತೊಗರಿಬೇಳೆಯಲ್ಲಿ ‘ಹುಳಭಾಗ್ಯ’ ನೀಡಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಆರೋಪಿಸಿದ್ದಾರೆ.

ಇಲ್ಲಿಗೆ ಈ ತಿಂಗಳ ಆರಂಭದಲ್ಲಿ ಪೂರೈಕೆಯಾಗಿರುವ ಅಕ್ಕಿ ಮತ್ತಿತರ ಧಾನ್ಯಗಳನ್ನು ಬಹುತೇಕ ಪಡಿತರ ಚೀಟಿದಾರರಿಗೆ ಈಗಾಗಲೇ ವಿತರಿಸಲಾಗಿದ್ದು, ಈ ಪ್ಯಾಕೇಟ್ನಲ್ಲಿ ಗುಗ್ಗುರು ಮತ್ತಿತರ ಹುಳು ಕೀಟ ಪತ್ತೆಯಾಗಿದೆ. ಇದರಿಂದಾಗಿ ಗ್ರಾಹಕರು ಸೋಮವಾರ ಅದನ್ನು ಮತ್ತೆ ವಾಪಾಸು ತಂದು ನ್ಯಾಯಬೆಲೆ ಅಂಗಡಿಗೆ ಒಪ್ಪಿಸಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ನಿರ್ದೇಶಕ ಲಕ್ಷ್ಮೀನಾರಾಯಣ ಉಡುಪ ನ್ಯಾಯಬೆಲೆ ಅಂಗಡಿಗೆ ಧಾವಿಸಿ ಬಂದು ಪ್ಯಾಕೇಟ್ ಪರಿಶೀಲಿಸಿದರು.

ಬೆಳಗಾಂನ ರಾಮದುರ್ಗಾ ಎಪಿಎಂಸಿ ಮಾರ್ಕೆಟ್ ಯಾರ್ಡ್ನಲ್ಲಿರುವ ಶ್ರೀ ಟ್ರೇಡರ್ಸ್ ಸಂಸ್ಥೆಯು ಪ್ಯಾಕಿಂಗ್ ಮತ್ತು ಸರಬರಾಜು ಗುತ್ತಿಗೆ ವಹಿಸಿಕೊಂಡಿದೆ. ಕಳೆದ ಮೇ ತಿಂಗಳಲ್ಲಿ ಈ ಪ್ಯಾಕೇಟ್ ಸಿದ್ಧಗೊಳಿಸಲಾಗಿದ್ದು, ಮೂರು ತಿಂಗಳೊಳಗೆ ಉಪಯೋಗಿಸುವುದು ಉತ್ತಮ ಎಂದು ಪ್ಯಾಕೇಟ್ನಲ್ಲಿ ನಮೂದಿಸಲಾಗಿದೆ. ಆದರೆ ಕಳೆದ ಆಗಸ್ಟ್ ತಿಂಗಳಿಗೆ ಈ ಪ್ಯಾಕೇಟ್ನ ಅವಧಿ ಮುಗಿದಿದ್ದರೂ ಈ ತಿಂಗಳ ಆರಂಭದಲ್ಲಿ ಇಲ್ಲಿಗೆ ಪೂರೈಸಿದ್ದಾರೆ. ಇದರಿಂದಾಗಿ ಬಹುತೇಕ ಪ್ಯಾಕೆಟ್ನಲ್ಲಿ ಗುಗ್ಗುರು ಮತ್ತಿತರ ಹುಳು ಕೀಟ ಪತ್ತೆಯಾಗಿದೆ. ಈ ಬಗ್ಗೆ ತಾಲ್ಲೂಕಿನ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ದೂರು ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
