ಬಂಟ್ವಾಳ:ದೇಶದಲ್ಲಿ ವಿವಿಧ ಜಾತಿ ಧರ್ಮಗಳ ಬಗ್ಗೆ ಅಂಧಕಾರದಲ್ಲಿ ಮುಳುಗಿರುವ ಕೆಲವೊಂದು ಸೀಮಿತ ಮೂಲಭೂತವಾದಿ ಸಂಘಟನೆಗಳಿಂದಾಗಿ ದೇಶದ ಏಕತೆ ಮತ್ತು ಸ್ವಾತಂತ್ಯ್ರಕ್ಕೆ ಭಾರೀ ಅಪಾಯಕಾರಿಯಾಗಿದೆ. ಇದರಿಂದಾಗಿ ದೇಶದಲ್ಲಿ ಇದುವರೆಗೆ ನಡೆದ ಕೆಲವೊಂದು ಹಿರಿಯ ಸಾಹಿತಿಗಳು ಸಹಿತ ಪತ್ರಕರ್ತರು ಮತ್ತು ವಿಚಾರವಾದಿಗಳ ಹತ್ಯೆ ನಡೆಯುತ್ತಿದ್ದರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಮಾತ್ರ ಸರ್ಕಾರ ಹಾಗೂ ಪೊಲೀಸ್ ಗುಪ್ತಚರ ಇಲಾಖೆ ವಿಫಲವಾಗುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆ ಸಂಚಾಲಕ ವಿಲ್ಫ್ರೆಡ್ ಡಿಸೋಜ ಹೇಳಿದ್ದಾರೆ. ತಾಲ್ಲೂಕಿನ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಶನಿವಾರ ಸಂಜೆ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಿರಂತರವಾಗಿ ಅಶಕ್ತರು ಮತ್ತು ದೀನದಲಿತರು ಹಾಗೂ ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತೆ, ಸಾಕ್ಷಿ ಪ್ರಜ್ಞೆ ಗೌರಿ ಲಂಕೇಶ್ ಅವರ ಹತ್ಯೆ ಮೂಲಕ ಅವರ ವಿಚಾರಧಾರೆ ಎಮದಿಗೂ ಸಾಯುವುದಿಲ್ಲ. ಇದಕ್ಕೆ ಬದಲಾಗಿ ದೇಶದಲ್ಲಿ ಎಲ್ಲಾ ಮೂಲಭೂತವಾದಿ ವಿಚಾರಗಳು ಸಾಯಬೇಕು ಎಂದು ಅವರು ತಿಳಿಸಿದರು.
ಸಿಪಿಐ ಮುಖಂಡರಾದ ಎಚ್.ವಿ.ರಾವ್, ಸುರೇಶ್ ಕುಮಾರ್, ಬಿ.ಶೇಖರ್, ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಎ.ರಾಮಣ್ಣ ವಿಟ್ಲ, ವಾಸು ಗಟ್ಟಿ, ಪ್ರಮುಖರಾದ ಕೃಷ್ಣ ಅಲ್ಲಿಪಾದೆ, ಪ್ರಬಾಕರ ದೈವಗುಡ್ಡೆ, ಉದಯ ಕುಮಾರ್, ಸೇಸಪ್ಪ ಬೆದ್ರಕಾಡು, ಹಾರುನ್ ರಶೀದ್, ಕೆ.ಎಚ್.ಅಬೂಬಕ್ಕರ್ ಮತ್ತಿತರರು ಇದ್ದರು.
ಬಂಟ್ವಾಳ ನಗರ ಠಾಣೆ ಎಎಸೈ ಸಂಜೀವ ಮತ್ತು ಕ್ರೈಂ ಇನ್ಸ್ಪೆಕ್ಟರ್ ಗಂಗಾಧರಪ್ಪ ನೇತೃತ್ವದ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು.
