ಅಮ್ಮುಂಜೆ: ಬಂಟ್ವಾಳತಾಲ್ಲೂಕಿನ ಅಮ್ಮುಂಜೆ ಸಮೀಪದ ರಾಮನಗರ ಎಂಬಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಎಸ್ಡಿಪಿಐ ವಲಯಾಧ್ಯಕ್ಷ ಆಶ್ರಫ್ ಕಲಾಯಿ ಇವರ ಸ್ಮರಣಾರ್ಥ ಇಲ್ಲಿನ ಕೆಲವೊಂದು ರಸ್ತೆಗಳಿಗೆ ಅನಧಿಕೃತವಾಗಿ ಅಳವಡಿಸಿದ್ದ ನಾಮಫಲಕವನ್ನು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದ್ದಾರೆ.
ಆಶ್ರಫ್ ಕಲಾಯಿ ಹತ್ಯೆಯಾಗಿ 40 ದಿನಗಳ ಬಳಿಕ ಇಲ್ಲಿನ ಮುಖ್ಯರಸ್ತೆ ಬಳಿ ಸ್ಥಳೀಯ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ನಿರ್ಮಿಸಿದ್ದ ಬಸ್ ತಂಗುದಾಣವನ್ನು ಕೂಡಾ ಉದ್ಘಾಟನೆ ದಿನದಂದೇ ಜಿಲ್ಲಾಧಿಕಾರಿ ಸೂಚನೆಯಂತೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ತೆರವುಗೊಳಿಸಿತ್ತು. ಇದೀಗ ಮತ್ತೆ ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಉಮೇಶ್ ಕುಮಾರ್ ನೇತೃತ್ವದ ಪೊಲೀಸರ ಬಿಗಿ ಬಂದೋಬಸ್ತಿನಲ್ಲಿ ತಹಶೀಲ್ದಾರ್ ನೇತೃತ್ವದ ತಂಡವು ಮಂಗಳವಾರ ದಿಢೀರ್ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಮೂರು ರಸ್ತೆಗಳಿಗೆ ಅಳವಡಿಸಿದ್ದ ಪ್ರತ್ಯೇಕ ಮಾರ್ಗಸೂಚಿ ಮತ್ತು ನಾಮಫಲಕ ತೆರವುಗೊಳಿಸಲಾಗಿದ್ದು, ಉಳಿದಂತೆ ಮಸೀದಿ ಬಳಿ ಕುಡಿಯುವ ನೀರಿನ ರೆಫ್ರಿಜರೇಟರ್, ಧ್ವಜ ಸ್ಥಂಭ ಮತ್ತಿತರ ಕಡೆಗಳಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೆ ಅಲವಡಿಸಿದ ನಾಮ ಫಲಕಗಳನ್ನು ಕೂಡಾ ನೋಟೀಸು ನೀಡಿ ಮುಂದಿನ 15 ದಿನಗಳೊಳಗೆ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ ಅವರಿಗೆ ತಹಶೀಲ್ದಾರ್ ಆದೇಶಿಸಿದರು. ಕಂದಾಯ ಇಲಾಖೆ ಸಿಬ್ಬಂದಿಗಳಾದ ಸೀತಾರಾಮ ಕಮ್ಮಾಜೆ, ಶೀತಲ್ ಮತ್ತಿತರರು ಇದ್ದರು. ಇನ್ನೊಂದೆಡೆ ಇಲ್ಲಿನ ಬಸ್ಸು ತಂಗುದಾಣ ನಿರ್ಮಾಣ ಸಹಿತ ನಾಮ ಫಲಕ ಅಳವಡಿಸುವ ಮೊದಲು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಅವರು ಅನುಮತಿ ನೀಡಿಲ್ಲ ಎಂದು ಸ್ಥಳೀಯ ಎಸ್ಡಿಪಿಐ ಮುಖಂಡ ಇಮ್ತಿಯಾಝ್ ಕಲಾಯಿ ಆರೋಪಿಸಿದ್ದಾರೆ.
