ಬಂಟ್ವಾಳ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಬಳಿ ಸುಮರು 5 ಕೋಟಿ ರೂ. ವೆಚ್ಚದಲ್ಲಿ ಪಂಜೆಮಂಗೇಶರಾಯರ ಸ್ಮಾರಕ ಭವನವನ್ನು ನಿರ್ಮಿಸಲು ಕರ್ನಾಟಕ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.ಕವಿಶಿಷ್ಯ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಮಂಗೇಶರಾಯರು ಸೂಕ್ಷ್ಮಸಂವೇದನೆಯ ರಸಭಾವದ ಕವಿ, ವಿಮರ್ಶಕ, ಸಾಹಿತಿಯಾಗಿದ್ದವರು. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಇವರು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಪಕ್ಕ ವಾಸ್ತವ್ಯವಿದ್ದ ಮನೆಯ ಸಮೀಪ ಭವನ ನಿರ್ಮಾಣಕ್ಕಾಗಿ ಈಗಾಗಲೇ 0.51 ಎಕ್ರೆ ನಿವೇಶನವನ್ನು ಕಾದಿರಿಸಲಾಗಿದೆ.ಮಂಗೇಶರಾಯರ ಸಾಹಿತ್ಯಕೃತಿಗಳ ಕುರಿತು ಅಧ್ಯಯನ ನಡೆಸಲು ಅವಕಾಶ ಒದಗಿಸುವುದಲ್ಲದೆ ಗ್ರಂಥಾಲಯ, ಸಾಹಿತ್ಯ, ರಂಗಚಟುವಟಿಕೆಗಳಿಗೆ ಅಗತ್ಯವಿರುವ ವೇದಿಕೆ, ಸಭಾಂಗಣ ಇತ್ಯಾದಿ ಸೌಲಭ್ಯಗಳೊಂದಿಗೆ ಭವನವು ನಿರ್ಮಾಣಗೊಳ್ಳಲಿದೆ ಎಂದು ಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
