ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಇಲ್ಲಿಂದ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಹೈಕೋರ್ಟ್ ನಿರ್ದೇಶನದಂತೆ ಘಟಕದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇಲ್ಲಿಂದ ಸ್ಥಳಾಂತರಗೊಳ್ಳಲು ಬಯಸುವ ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಶಾಲೆ, ಅಂಗನವಾಡಿ, ಮದರಸವನ್ನು ಮಾತ್ರ ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಜಗದೀಶ್ ಖಡಕ್ ಸೂಚನೆ ನೀಡಿದ್ದಾರೆ.
ಕಂಚಿನಡ್ಕ ಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಹಠಾತ್ ಭೇಟಿ ನೀಡಿದ ಅವರು, ಘಟಕದ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಈ ಆದೇಶ ನೀಡಿದ್ದಾರೆ.

ಘಟಕದ ಸುತ್ತ ಮುತ್ತ ವಾಸ್ತವ್ಯ ಇರುವ ಅಧಿಕೃತ ಮತ್ತು ಅನಧಿಕೃತ ಮನೆಗಳ ವಿವರವನ್ನು ಪಡೆಯಬೇಕು. ಅವರಿಗೆ ತ್ಯಾಜ್ಯ ವಿಲೇವಾರಿ ಘಟಕದಿಂದ ಆಗುವ ಪರಿಣಾಮದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲಿಂದ ಸ್ಥಳಾಂತರಗೊಳ್ಳಲು ಬಯಸುವ ನಿವಾಸಿಗಳಿಗೆ ಪಕ್ಕದ ಇರಾ ಗ್ರಾಮದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಲಿದೆ. ಹೋಗಲು ಇಚ್ಛಿಸದವರು ಇಲ್ಲಿಯೇ ವಾಸ್ಥವ್ಯ ಹೂಡಲು ಆಕ್ಷೇಪವಿಲ್ಲ ಎಂದು ಗ್ರಾಮಸ್ಥರಿಗೆ ತಿಳಿ ಹೇಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿ ವಾಸ್ಥವ್ಯವಿರುವವರೆಲ್ಲರೂ ಇರಾ ಗ್ರಾಮಕ್ಕೆ ತೆರಳಲು ಬಯಸಿದರೆ ಮನೆ ನಿರ್ಮಾಣಕ್ಕೆ ಅನುದಾನ ಸಹಿತ ಎಲ್ಲ ರೀತಿಯ ಮೂಲಭೂತ ಸೌಕರ್ಯವನ್ನು ಜಿಲ್ಲಾಡಳಿತದಿಂದ ಮಾಡಲಾಗುವುದು. ಇಲ್ಲಿರುವ ಶಾಲೆ, ಅಂಗನವಾಡಿ, ಮದರಸವನ್ನು ಕೂಡಾ ಅಲ್ಲಿಗೆ ಸ್ಥಳಾಂತರಿಸಲಾಗುವುದು. ಒಂದು ವೇಳೆ ಯಾರೊಬ್ಬರು ಕೂಡಾ ಇಲ್ಲಿಂದ ಸ್ಥಳಾಂತರಕ್ಕೆ ಬಯಸದಿದ್ದಲ್ಲಿ ಶಾಲೆ, ಅಂಗನವಾಡಿ, ಮದರಸವನ್ನು ಕಡ್ಡಾಯವಾಗಿ ಇಲ್ಲಿಂದ ಕೂಡಲೇ ಸ್ಥಳಾಂತರಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಸಜೀಪ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ಘನ ತ್ಯಾಜ್ಯ ಘಟಕದ ಕಾಮಗಾರಿ ಆರಂಭಿಸುವ ಮೊದಲು ಘಟಕದ ಸುತ್ತ ಮುತ್ತಲಿರುವ 140ರಷ್ಟು ಮನೆಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮನೆಗಳನ್ನು ಸ್ಥಳಾಂತರ ಮಾಡಿದ ಪ್ರದೇಶದಲ್ಲೇ ಶಾಲೆ, ಅಂಗನವಾಡಿ, ಮದರಸವನ್ನು ನಿರ್ಮಾಣ ಮಾಡಬೇಕು. ಘಟಕದ ನಿರ್ವಹಣೆಯು ಜಿಲ್ಲಾಧಿಕಾರಿಯ ಉಸ್ತುವಾರಿಯಲ್ಲಿರಬೇಕು. ಪರಿಸರ ಇಲಾಖೆಯ ನಿಯಮಗಳು ಮತ್ತು ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಜಿಲ್ಲಾಧಿಕಾರಿಯವರನ್ನು ಮನವಿ ಮಾಡಿದರು.
ಇದೇ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಸ್.ಅಬ್ಬಾಸ್ ಅವರು ಮಧ್ಯೆ ಪ್ರವೇಶಿಸಿ ಘನ ತ್ಯಾಜ್ಯ ಘಟಕವನ್ನೇ ಇಲ್ಲಿಂದ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಯವರಲ್ಲಿ ಕೋರಿಕೆಯನ್ನಿಟ್ಟರು. ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ ಡಾ. ಜಗದೀಶ್ ತ್ಯಾಜ್ಯ ವಿಲೇವಾರಿ ಘಟಕ ನ್ಯಾಯಾಲದ ನಿರ್ದೇಶನದಂತೆ ಆಗುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಇಲ್ಲಿಂದ ತೆರವುಗೊಳಿಸಲು ಸಾಧ್ಯವಿಲ್ಲ ಎಂದರು.
ಘಟಕದ ಮುಂದುವರಿದ ಕಾಮಗಾರಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ತಹಶೀಲ್ದಾರ್, ಪುರಸಭಾ ಮುಖ್ಯಾಧಿಕಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಒಟ್ಟು ಸೇರಿಕೊಂಡು ಚರ್ಚೆ ನಡೆಸಿ ಕಾಮಗಾರಿಗೆ ಸಂಬಂಧಿಸಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಇತ್ಯರ್ಥ ಪಡಿಸಲು ಸಾಧ್ಯವಾಗದೆ ಇರುವ ಸಮಸ್ಯೆಗಳಿದ್ದರೆ ತಕ್ಷಣ ತನ್ನ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಕೋಶಾ ಯೋಜನಾ ನಿರ್ದೇಶಕ ಪ್ರಸನ್ನ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾ ಮಿರಾಂದ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಆರೋಗ್ಯಾಧಿಕಾರಿ ರತ್ನ ಪ್ರಸಾದ್, ಪಿಡಿಒ ವೀರಪ್ಪ ಗೌಡ ಉಪಸ್ಥಿತರಿದ್ದರು.
ಬಾಕ್ಸ್…
ಕಂಚಿನಡ್ಕ ಘನ ತ್ಯಾಜ್ಯ ವಿಲೇವಾರಿ ಘಟಕದ ಮುಂದುವರಿದ ಕಾಮಗಾರಿಗೆ ಸಂಬಂಧಿಸಿ ಪುರಸಭೆಯ ಪ್ರತೀ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುತ್ತಿದೆ ವಿನಹ ಈವರೆಗೂ ಕಾಮಗಾರಿಯನ್ನು ಮಾತ್ರ ಪುರಸಭೆ ಕೈಗೆತ್ತಿಕೊಳ್ಳಲಿಲ್ಲ. ಈ ನಡುವೆ ಸಹಾಯಕ ಕಮಿಷನರ್ ಕಂಚಿನಡ್ಕ ಪದವಿಗೆ ಭೇಟಿ ನೀಡಿ ಪುರಸಭೆ ಹಾಗೂ ಸ್ಥಳೀಯ ಪಂಚಾಯತ್ ಅಧಿಕಾರಿಗಳ ಸಭೆಯನ್ನು ನಡೆಸಿ ಆವಳನ್ನು ಆಳಿಸಿದ್ದರು. ಅಂದು ತೆಗೆದುಕೊಂಡ ತೀರ್ಮಾಣಗಳು ಈವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ಇದೀಗ ಗುರುವಾರ ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವೊಂದು ನಿರ್ದೇಶನ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿದೆ ಎಂಬುದು ಕಾದು ನೋಡಬೇಕು.
ಬಾಕ್ಸ್…
ಪಿಡಿಒ ತರಾಟೆಗೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ಲೈನ್ಗಳನ್ನು ಗ್ರಾಮದ ಚರಂಡಿಗಳಲ್ಲಿ ಅಳವಡಿಸಿ ಚೇಂಬರ್ ನಿರ್ಮಿಸಿರುವುದರಿಂದ ಚರಂಡಿಗಳು ಬ್ಲಾಕ್ ಆಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ಜಿಲ್ಲಾಧಿಕಾರಿಯವರಲ್ಲಿ ದೂರಿಕೊಂಡರು. ಈ ಬಗ್ಗೆ ತಾಪಂ ಇಒರವರ ಗಮನಕ್ಕೆ ತರಲಾಗಿದೆಯೇ ಎಂದು ಪಿಡಿಒ ವೀರಪ್ಪ ಗೌಡರಲ್ಲಿ ಮಾಹಿತಿ ಕೇಳಿದಾಗ ಇಲ್ಲ ಎಂದಾಗ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ಕೂಡಲೇ ಇಒರನ್ನು ಸಂಪರ್ಕಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
