ಕೈಕಂಬ : ಬೀಟ್ ಪೊಲೀಸ್ ವ್ಯವಸ್ಥೆಯಿಂದ ಅಪರಾಧ ಕಡಿಮೆ ಮಾಡಬಹುದೇ ಹೊರತು ಅಪರಾಧ ಮೂಲೋಚ್ಚಾಟನೆ ಮಾಡಲಾಗುವುದಿಲ್ಲ. ಅಪರಾಧದಿಂದ ಯಾವುದೇ ದೇಶ ಹೊರತಾಗಿಲ್ಲ. ಎಲ್ಲರಿಗೂ ತಮ್ಮ ಸಮಸ್ಯೆ ಇಟ್ಟುಕೊಂಡು ಪೊಲೀಸ್ ಠಾಣೆಗಳಿಗೆ ಹೋಗಲಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಪೊಲೀಸ್ ಬೀಟ್ ನಿಮ್ಮ ನೆರವಿಗೆ ಬರುವುದು. ಇದು ನಾಗರಿಕರು ಮತ್ತು ಪೊಲೀಸರ ಮಧ್ಯೆ ಸೇತುವಿನಂತೆ ಕೆಲಸ ಮಾಡಲಿದೆ ಎಂದು ಎಸಿಪಿ ರಾಜೇಂದ್ರ ಕುಮಾರ್ ಹೇಳಿದರು.

ಗುರುಪುರ ಕೈಕಂಬದ ಮೆಗಾ ಪ್ಲಾಜಾದಲ್ಲಿ ಅಗಸ್ಟ್ 20ರಂದು ಪೊಲೀಸ್ ಇಲಾಖೆ ಆಯೋಜಿಸಿದ ಬಜಪೆ ಪೊಲೀಸ್ ಠಾಣಾ ಸರಹದ್ದಿನ 47 ಗ್ರಾಮ ಗಸ್ತುಗಳ ಸದಸ್ಯರ `ಸಮಾವೇಶ’ದಲ್ಲಿ ಮಾತನಾಡುತ್ತಿದ್ದ ಅವರು, ಸಾರ್ವಜನಿಕರ ಸಹಕಾರದಿಂದ ಪೊಲೀಸ್ ಕೆಲಸ ಸುಲಭವಾಗುತ್ತದೆ ಮತ್ತು ಸಮಾಜದಲ್ಲಿ ಶಾಂತಿ ನೆಲಸುವಂತೆ ಮಾಡಬಹುದು ಎಂದರು.
ಪೊಲೀಸ್ ಬಲವನ್ನು ತಳಮಟ್ಟದಿಂದ ಅಭಿವೃದ್ಧಿಪಡಿಸಲು `ಬೀಟ್ ಪದ್ಧತಿ’ ಅವಶ್ಯ. ಬಜಪೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅನುಷ್ಠಾನಗೊಳಿಸಿರುವ 47 ಬೀಟ್ಗಳಲ್ಲಿ 2,350 ಸದಸ್ಯರಿದ್ದಾರೆ. ಇವರೊಂದಿಗೆ 42 ಮಂದಿ ಪೊಲೀಸರು ಬೀಟ್ ಕೆಲಸ ನಿರ್ವಹಿಸಲಿದ್ದಾರೆ. ಪೊಲೀಸರಿಂದಲೇ ಶಾಂತಿ ವ್ಯವಸ್ಥೆ ಸಾಧ್ಯವಿಲ್ಲ. ಅದೇನೇ ಇದ್ದರೂ ನಾಗರಿಕರ ಬೆಂಬಲದಿಂದ ಮಾತ್ರ ಸಾಧ್ಯ. ಬೀಟ್ ವ್ಯವಸ್ಥೆಯೊಳಗೆ `ಕ್ಲಬ್’ ಮಾಡಲಾಗಿದ್ದು, ಅವುಗಳ ಸದಸ್ಯರು ಮತ್ತು ಪೊಲೀಸರು ತಮ್ಮ ಕೆಲಸ ನಿರ್ವಹಿಸಲಿದ್ದಾರೆ ಎಂದು ಬಜಪೆ ಪೊಲೀಸ್ ಠಾಣಾಧಿಕಾರಿ ಟಿ ಡಿ ನಾಗರಾಜ್ ಹೇಳಿದರು.
ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ ಸ್ಥಳದಲ್ಲಿರುವ ಕೆಲವರನ್ನು ತಕ್ಷಣ ವಶಕ್ಕೆ ತೆಗೆದುಕೊಳ್ಳುತ್ತಾರೆ. ಇದು ಕ್ರಮ ತನಿಖೆ ಹಂತದಲ್ಲಿ ನೆರವಾಗುತ್ತದೆ ಎಂದವರು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾತ್ರಿ ವೇಳೆ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದು ಹೋಗುವವರ ವಿರುದ್ಧ ಕ್ರಮ ಸಾಲದು ಎಂದು ಕಂದಾವರ ಗ್ರಾಮದ ಸದಸ್ಯರೊಬ್ಬರು ಗಮನಹರಿಸಿದ್ದು, ಮೊದಲು ಈ ವಿಷಯ ಬೀಟ್ ಪೊಲೀಸರಲ್ಲಿ ಚರ್ಚಿಸಿಕೊಳ್ಳಿ, ಆಮೇಲೆ ನಿರ್ದಿಷ್ಟ ಇಲಾಖೆಗೆ ವಿಷಯ ತಲುಪಿಸಲಾಗುವುದು ಎಂದು ಎಸಿಪಿ ಸಲಹೆ ನೀಡಿದರು.
ಗುರುಪುರ ಕೈಕಂಬ ಮತ್ತು ಗಂಜಿಮಠದಲ್ಲಿ ಟ್ರಾಫಿಕ್ ಸಮಸ್ಯೆ, ಮೂರು ಗ್ರಾಮ ಪಂಚಾಯತುಗಳ ಕೂಟ ರಚನೆ, ಹೊರಗಿನ ಕೆಲಸಗಾರರಿಗೆ ಸುರಕ್ಷತೆ, ಕಂಪೆನಿಗೆ ಲೈಸೆನ್ಸ್ ನೀಡುವ ವಿಷಯದಲ್ಲಿ ಕೆಪಿಸಿಸಿ ಸದಸ್ಯ ಪೃಥ್ವೀರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಅಧಿಕಾರಿ, ಈ ಸಮಸ್ಯೆಗಳಿಗೆ ಕ್ರಮ ಜರುಗಿಸಲು ಹಿರಿಯ ಅಧಿಕಾರಿ/ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಹೆದ್ದಾರಿ ಬದಿಯ ಮದ್ಯದಂಗಡಿ ಮುಚ್ಚಿವೆ. ಆದರೆ ಗ್ರಾಮೀಣ ಪ್ರದೇಶಗಳ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಮತ್ತು ಪರಿಶಿಷ್ಟ ವರ್ಗದ ಸಮಸ್ಯೆಗಳ ಆಲಿಕೆಗೆ ತಿಂಗಳಿಗೊಂದು ಪೊಲೀಸ್-ಪರಿಶಿಷ್ಟ ವರ್ಗದವರ ಸಭೆ ನಡೆಸಬೇಕೆಂದು ಬಡಗಎಡಪದವಿನ ಪರಿಶಿಷ್ಟ ವರ್ಗದ ಮುಖಂಡ ಶ್ರೀನಿವಾಸ ಮನವಿ ಮಾಡಿದರು.
ಪರಿಶಿಷ್ಟ ವರ್ಗದ ಪ್ರತ್ಯೇಕ ಸಭೆ ನಡೆಸಲು ಪ್ರಯತ್ನಿಸಲಾಗುವುದು ಎಂದ ಎಸಿಪಿ, ಬೀಟ್ ವ್ಯವಸ್ಥೆಯಲ್ಲಿರುವ ಪರಿಶಿಷ್ಟ ವರ್ಗದ ಸದಸ್ಯರು ತಮ್ಮ ಬೀಟಿನಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಬಹುತೇಕ ಎಲ್ಲ ಗ್ರಾಮಗಳ ನೂರಾರು ಪ್ರತಿನಿಧಿಗಳು ಪಾಲ್ಗೊಂಡಿದ್ದು, ಕೆಲವು ಮಹತ್ವದ ಪ್ರಶ್ನೆ ಕೇಳಿ ಬಂದಿವೆ. ಬೀಟ್ ಸದಸ್ಯರಿಗೆ ಗುರುತಿನ ಚೀಟಿ ನೀಡಬೇಕೆನ್ನುವ ಪ್ರಶ್ನೆಯೊಂದಕ್ಕುತ್ತರಿಸಿದ ನಾಗರಾಜ್, ಈ ವಿಷಯ ಈಗಾಗಲೇ ಚರ್ಚಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕಂದಾವರ ಪಂಚಾಯತ್ ಅಧ್ಯಕ್ಷೆ ವಿಜಯಾ, ಕೃಷ್ಣ ಅಮೀನ್, ಅಬೂಬಕ್ಕರ್, ಗಂಜಿಮಠ ಪಂಚಾಯತ್ ಉಪಾಧ್ಯಕ್ಷ ಮೊದಲಾದವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರು. ಪಿಎಸ್ಐ ರಾಜಾರಾಮ್ ಕಾರ್ಯಕ್ರಮ ನಿರೀಪಿಸಿದ್ದು, ವೇದಿಕೆಯಲ್ಲಿ ಪಿಎಸ್ಐ ಭರತ್ ಕುಮಾರ್ ಇದ್ದರು.
ಬಜಪೆ ಪೊಲೀಸ್ ಸರಹದ್ದಿನಲ್ಲಿ ಅತ್ಯಧಿಕ ಪೊಕ್ಸೋ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಸಕ್ತ ಮಹಿಳೆಯರಿಗೆ ಚುಡಾಯಿಸುವುದರಿಂದ ಹಿಡಿದು ದೌರ್ಜನ್ಯವೆಸಗುವ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎಂದು ನಾಗರಾಜ್ ಹೇಳಿದರು.
