ವಾಷಿಂಗ್ಟನ್: ಹಿಜ್ಬುಲ್ ಮಜಾಹಿದ್ದೀನ್ ಉಗ್ರ ಸಂಘಟನೆ ಹಿರಿಯ ಮುಖಂಡ ಸೈಯದ್ ಸಲಾವುದ್ದೀನ್‌ನನ್ನು ಜಾಗತಿಕ ಉಗ್ರ ಎಂದು ಅಮೆರಿಕಾ ಘೋಷಣೆ ಮಾಡಿದೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೂ ಮುನ್ನವೇ ಈ ಘೋಷಣೆ ಹೊರಬಿದ್ದಿದೆ. ಪಾಕ್ ಆಕ್ರಮಿತ ಭಾರತದಲ್ಲಿ ಭಯೋತ್ಪಾದನಾ ಚುಟುವಟಿಕೆಯಲ್ಲಿ ತೊಡಗಿರುವ 71 ವರ್ಷದ ಉಗ್ರ ಸೈಯದ್ ಸಲಾವುದ್ದೀನ್‌ನನ್ನು ‘ ಜಾಗತಿಕ ಉಗ್ರ’ ಎಂದು ಅಮೆರಿಕಾ ಘೋಷಿಸಿದೆ.
2014ರಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆದ ದಾಳಿ ಸೇರಿದಂತೆ ಹಲವು ದಾಳಿಗಳ ಹೊಣೆಯನ್ನು ಸೈಯದ್ ಸಲಾವುದ್ದೀನ್ ಹೊತ್ತಿದ್ದ. ಈಗ ಅಮೆರಿಕಾ ಸೈಯದ್ ಸಲಾವುದ್ದೀನ್‌ನನ್ನು ‘ಜಾಗತಿಕ ಉಗ್ರ’ ಎಂದು ಘೋಷಿಸಲಾಗಿದ್ದು, ಅಮೆರಿಕಾ ನಾಗರಿಕರು ಆತನ ಜೊತೆ ಯಾವುದೇ ಆರ್ಥಿಕ ವಹಿವಾಟು ನಡೆಸದಂತೆ ಎಚ್ಚರಿಸಿದೆ. ಅಲ್ಲದೇ, ಅಮೆರಿಕಾ ವ್ಯಾಪ್ತಿಯಲ್ಲಿನ ಸೈಯದ್ ಸಲಾವುದ್ದೀನ್‌ನ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಅಮೆರಿಕಾ ಪ್ರಕಟಣೆ ತಿಳಿಸಿದೆ. ಅಮೆರಿಕಾದ ಈ ಘೋಷಣೆಯನ್ನು ಭಾರತ ಸ್ವಾಗತಿಸಿದೆ.ಇನ್ನು, ಉಗ್ರನಾಗುವ ಮುನ್ನ ಸೈಯದ್ ಸಲಾವುದ್ದೀನ್, 1987ರಲ್ಲಿ ಜಮ್ಮು- ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ. ನಂತರ ಕಾಶ್ಮೀರದಲ್ಲಿ ನಡೆದ ಹಲವು ಹಿಂಸಾಚಾರ ಪ್ರಕರಣಗಳಲ್ಲಿ ಬಂಧಿತನಾಗಿ ಬಿಡುಗಡೆಗೊಂಡಿದ್ದ. ಬಳಿಕ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದ್ದ. ಕೆಲ ದಿನಗಳ ಹಿಂದೆಯಷ್ಟೆ ಐಎಸ್‌ಐಎಸ್ ಉಗ್ರ, ಕರ್ನಾಟಕದ ಭಟ್ಕಳ ಮೂಲದ ಮೊಹಮ್ಮದ್ ಶಫಿ ಆರ್ಮಾರ್‌ನನ್ನೂ ಅಮೆರಿಕಾ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದ್ದು ಇಲ್ಲಿ ಸ್ಮರಿಸಬಹುದು
