ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಮತ್ತೊಂದು ಐತಿಹಾಸಿಕ ಬದಲಾವಣೆಗೆ ಯೋಜನೆ ರೂಪುಗೊಳ್ಳುತ್ತಿದೆ ಎಂದು ತಿಳಿದು ಬಂದಿದೆ.ದೇಶದಲ್ಲಿ 150 ವರ್ಷಗಳಿಂದ ಏಪ್ರಿಲ್ 1ರಿಂದ ಮಾರ್ಚ್ 31ವರೆಗಿನ ಅವಧಿಯನ್ನು ಹಣಕಾಸು ವರ್ಷ ಎಂದು ಪರಿಗಣಿಸಲಾಗುತ್ತಿದೆ. ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಆಗುತ್ತಿದೆ. ಪ್ರಸಕ್ತ ಸಾಲಿನಿಂದ ರೈಲ್ವೆ ಬಜೆಟ್ ಮತ್ತು ಜನರಲ್ ಬಜೆಟ್ಗಳೆರಡನ್ನೂ ಒಟ್ಟಿಗೆ ಮಂಡಿಸಲಾಗಿದೆ.
ಇದೀಗ ಏಪ್ರಿಲ್ನಿಂದ ಮಾರ್ಚ್ವರೆಗಿನ ಹಣಕಾಸು ವರ್ಷವನ್ನು ಜನವರಿಯಿಂದ ಡಿಸೆಂಬರ್ ಅವಧಿಗೆ ಬದಲಾಯಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆಯಂತೆ. 2018ರಿಂದಲೇ ಇದು ಶುರುವಾಗುತ್ತಂತೆ. ಅಂತೆಯೇ ನವೆಂಬರ್ನಲ್ಲಿ ವಾರ್ಷಿಕ ಬಜೆಟ್ ಮಂಡಿಸಲು ಚಿಂತನೆ ನಡೆದಿದೆಯಂತೆ.2017-18ನೇ ಸಾಲಿನ ಬಜೆಟ್ನ್ನು ಪ್ರತಿವರ್ಷದಂತೆ ಫೆಬ್ರವರಿ ಕೊನೆವಾರದಲ್ಲಿ ಮಂಡಿಸದೇ ಫೆಬ್ರವರಿ1ರಂದು ಮಂಡಿಸಲಾಯಿತು. ಇದೀಗ ನವೆಂಬರ್ನಲ್ಲೇ ಬಜೆಟ್ ಮಂಡಿಸಿ, ಜನವರಿ 1ರಿಂದ ಹೊಸ ಹಣಕಾಸು ವರ್ಷ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.1867ರಲ್ಲಿ ಬ್ರಿಟನ್ ಸರ್ಕಾರ ಏಪ್ರಿಲ್ 1ರಿಂದ ಮಾರ್ಚ್ 31ವರೆಗಿನ ಅವಧಿಯನ್ನು ಹಣಕಾಸು ವರ್ಷ ಎಂದು ಘೋಷಿಸಿತ್ತು. ಅದನ್ನೇ ಭಾರತ ಅನುಸರಿಸಿಕೊಂಡು ಬಂದಿದೆ. ಅದಕ್ಕಿಂತ ಮೊದಲು ಮೇ 1ರಿಂದ ಏಪ್ರಿಲ್ 30ರವರೆಗಿನ ಅವಧಿಯನ್ನು ಹಣಕಾಸು ವರ್ಷವಾಗಿತ್ತು.ಪ್ರಧಾನಿ ನರೇಂದ್ರ ಮೋದಿ ದೇಶದ ಅಗತ್ಯತೆಗಳಿಗೆ ಅನುಗುಣವಾಗಿ ಹಣಕಾಸು ವರ್ಷ ಬದಲಾಗಬೇಕು ಎಂದು ಭಾವಿಸಿದ್ದು, ಸಾಧಕ ಬಾಧಕಗಳ ಪರಿಶೀಲನೆಗೆ ಸರ್ಕಾರದ ಅತ್ಯುನ್ನತ ಸಮಿತಿ ರಚಿಸಿದ್ದರು. ಈ ಸಮಿತಿ ಕಳೆದ ಡಿಸೆಂಬರ್ನಲ್ಲಿ ವಿಸ್ತೃತ ವರದಿ ಸಲ್ಲಿಸಿದೆ.
ಹಣಕಾಸು ವರ್ಷದ ಅವಧಿಯನ್ನು ಬದಲಾಯಿಸುವುಕ್ಕೆ ನೀತಿ ಆಯೋಗ, ಸಂಸತ್ತಿನ ಸ್ಥಾಯಿ ಸಮಿತಿ ಕೂಡಾ ಸಮ್ಮತಿಸಿವೆ.
ಈಗಾಗಲೇ ಮಧ್ಯಪ್ರದೇಶ ಸರ್ಕಾರ ಹಣಕಾಸು ವರ್ಷವನ್ನು ಬದಲಾಯಿಸಿರುವುದನ್ನು ಇಲ್ಮಿ ಸ್ಮರಿಸಬಹುದು. ಈ ವರ್ಷ ಡಿಸೆಂಬರ್ನಲ್ಲೇ ಆ ಸರ್ಕಾರ ಬಜೆಟ್ ಮಂಡಿಸಲು ಯೋಜನೆ ರೂಪಿಸುತ್ತಿದೆ.
