ಮುಂಬಯಿ: ದಕ್ಷಿಣ ಕನ್ನಡದಿಂದ ಮುಂಬಯಿಗೆ ಒಂಬತ್ತು ದಶಕಗಳ ಹಿಂದೆ ಆಗಮಿಸಿದ ಬ್ರಾಹ್ಮಣರು ಮುಂಬಯಿಯಲ್ಲಿ 1925ರಲ್ಲಿ ಸ್ಥಾಪಿಸಿದ ಬಿಎಸ್‍ಕೆಬಿಎ (ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಸಂಸ್ಥೆಯಿಂದ ಸ್ಥಾಪಿತ `ಗೋಕುಲ’ ಇದರ ಪುನರ್ ನಿರ್ಮಾಣ ಮತ್ತು ಸುಸಜ್ಜಿತ ಭನವದ ನಿಮಿತ್ತ ಉಭಯ ಸಂಸ್ಥೆಗಳ ಸಯಾನ್ ಪೂರ್ವದಲ್ಲಿನ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಶ್ರೀ ಗೋಪಾಲಕೃಷ್ಣ ದೇವರನ್ನು ಕಳೆದ ಶನಿವಾರ ನವಿ ಮುಂಬಯಿ ಅಲ್ಲಿನ ಸೀವುಡ್ಸ್‍ನ ಆಶ್ರಯದ ಬಾಲಾಲಯಕ್ಕೆ ಸ್ಥಳಾಂತರಿಸಿ ಇಂದಿಲ್ಲಿ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

ಶನಿವಾರ ಸಂಜೆ ಬರಮಾಡಿ ನೆಲಮಹಡಿಯಲ್ಲಿಸಿ ದೇವರಿಗೆ ಗೋಕುಲದ ಪ್ರಧಾನ ಅರ್ಚಕ ಮುಚ್ಚೂರು ಹರಿ ಭಟ್ ಪ್ರಾತಃಕಾಲದ ಪೂಜೆ ನಡೆಸಿದ್ದು, ವಿದ್ವಾನ್ ವೇದಮೂರ್ತಿ ಮುರಳೀಧರ ತಂತ್ರಿ ಎಡಪದವು ಅವರು ಪಂಚವಿಂಶತಿ ಕಲಶ, ಗಣಯಾಗ, ಪ್ರಧಾನ ಹೋಮ, ತತ್ವಕಲಶ ಹೋಮ, ಬಿಂಬಪ್ರತಿಷ್ಠೆ ನೆರವೇರಿಸಿದರು. ಪೂರ್ವಾಹ್ನ ಸಕಲ ಪೂಜಾಧಿಗಳೊಂದಿಗೆ ಪವಿತ್ರೀಕರಿಸಿದ ಬಳಿಕ ಸುವಾಸಿನಿಯರ ಭಕ್ತಿಪೂರ್ವಕ ಭಜನೆ ಮತ್ತು ಪುಣ್ಯಕಲಶಗಳ, ಕೊಂಬು ವಾದ್ಯ ಬ್ಯಾಂಡುಗಳ ನೀನಾದ, ವಾದ್ಯಘೋಷಗಳೊಂದಿಗೆ ಅಸೋಸಿಯೇಶ ನ್ ಮತ್ತು ಜಿಪಿಟಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಮತ್ತು ವಿಜಯಲಕ್ಷ್ಮೀ ಎಸ್.ರಾವ್ ದಂಪತಿ ಹಾಗೂ ಪದಾಧಿಕಾರಿಗಳು ಗೋಕುಲದ ಆರಾಧ್ಯದೇವರಾದ ಶ್ರೀ ಗೋಪಾಲಕೃಷ್ಣ ದೇವರ ಉತ್ಸವಮೂರ್ತಿ ಯನ್ನು ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಸದಸ್ಯ ಕೃಷ್ಣ ಆಚಾರ್ಯ ಕಲಶಹೊತ್ತು ಭಕ್ತಿಪೂರ್ವಕವಾಗಿ ಮೂರನೇ ಮಹಡಿಯ ಪ್ರತಿಷ್ಠಾಪನಾ ಸ್ಥಳಕ್ಕೆ ತಂದು ಬೆಳ್ಳಿಯ ಪ್ರಭಾವಳಿಯಲ್ಲಿರಿಸಿದರು. ವೈಧಿಕರು ಪೂಜೆಯನ್ನೂ ಮತ್ತು ಭಕ್ತರು ಭಜನೆ ನಡೆಸಿದ ಬಳಿಕ ಮೀನ ಲಗ್ನದ ಮುಹೂರ್ತದಲ್ಲಿ ನೂತನವಾಗಿ ರೂಪಿಸಿದ ಅಮೃತಶಿಲಾಮಯ ಪೀಠದಲ್ಲಿ ಶ್ರೀ ದೇವರ ಮಂಗಳಮೂರ್ತಿಯನ್ನಿರಿಸಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ಮುಕುಟ ಧರಿಸಿ ವಿವಿಧ ಅಭಿಷೇಕಗಳೊಂದಿಗೆ ಪವಿತ್ರೀಕರಿಸಲಾಯಿತು. ಪುರೋಹಿತರು ಮಹಾಪೂಜೆ ನೆರವೇರಿಸಿ ಪ್ರಸಾದ ವಿತರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.




ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ವಾಮನ ಹೊಳ್ಳ ಮತ್ತು ಪಿ.ಉಮೇಶ್ ರಾವ್, ಗೌರವ ಪ್ರಧಾನ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಗೌರವ ಕೋಶಾಧಿಕಾರಿ ಸಿಎ| ಹರಿದಾಸ್ ಭಟ್, ಜೊತೆ ಕಾರ್ಯದರ್ಶಿಗಳಾದ ಚಂದ್ರಶೇಖರ್ ಭಟ್ ಮತ್ತು ಪ್ರಶಾಂತ್ ಹೆರ್ಲೆ, ಮಹಿಳಾ ವಿಭಾಗಧ್ಯಕ್ಷೆ ಶೈಲಿನಿ ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಗೌ| ಪ್ರ| ಕಾರ್ಯದರ್ಶಿ ಮತ್ತು ವಿಶ್ವಸ್ಥ ಎ.ಎಸ್ ರಾವ್, ವಿಶ್ವಸ್ಥ ಮಂಡಳಿ ಸದಸ್ಯರುಗಳಾದ, ಬಿ.ರಮಾನಂದ ರಾವ್, `ಆಶ್ರಯ’ದ ಮುಖ್ಯಸ್ಥೆ ಶ್ರೀಮತಿ ಚಂದ್ರಾವತಿ ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್, ಕಾರ್ಯಕಾರಿ ಸಮಿತಿ ಸದಸ್ಯರು, ಪಿ.ವಿ ಐತಾಳ್, ಹೆಚ್.ಬಿ.ಎಲ್ ರಾವ್ ಸೇರಿದಂತೆ ನೂರಾರು ಭಕ್ತಾಭಿಮಾನಿಗಳು ಪುಣ್ಯಾಧಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾದರು.
(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)





