ಮುಂಬಯಿ: ಮುಂಬಯಿನ ತುಳು ಕನ್ನಡಿಗ ನಿರ್ದೇಶಕ-ನಟ, `ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ತುಳು ಚಲನಚಿತ್ರ ನಿರ್ಮಾಪಕ ರಾಜಶೇಖರ್ ಆರ್.ಕೋಟ್ಯಾನ್‍ಗೆ ಮಲೇಷಿಯಾ ರಾಷ್ಟ್ರದ ದ ರಾಯಲ್ ಅಕಾಡೆಮಿ ಆಫ್ ಗ್ಲೋಬಲ್ ಪೀಸ್ ಸಂಸ್ಥೆಯು ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿದೆ.
ರಾಜಶೇಖರ್ ಕೋಟ್ಯಾನ್ ಅವರ ಸಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಮನವರಿಸಿ ಓರ್ವ ನಿಷ್ಠಾವಂತ ಕಲಾಕಾರ, ಪ್ರಾಮಾಣಿಕತೆ ಮತ್ತು ಅವಿರತ ಶ್ರಮ ಇವರ ಸದ್ಗುಣತಾ ಸಂಪನ್ನರಾಗಿ ಅತ್ತ್ಯುತ್ತಮ ಸಂಘಟನಾ ಚತುರ, ಪ್ರತಿಭಾನ್ವಿತ ಕಲಾಕಾರ ಎಂದೇ ಗುರುತಿಸಲ್ಪಟ್ಟ ರಾಜಶೇಖರ್ ಕೋಟ್ಯಾನ್ ಮೂಲತಃ ಉಡುಪಿ ಮುದರಂಗಡಿ ಅಲ್ಲಿನ ಸಾಂತೂರು ಗರಡಿ ಮನೆತನದ ರಾಘವೇಂದ್ರ ಕೋಟ್ಯಾನ್ ಮತ್ತು ಕಲ್ಯಾಣಿ ಆರ್.ಕೋಟ್ಯಾನ್ ದಂಪತಿ ಸುಪುತ್ರನಾಗಿ ಬಹುಮುಖ ಪ್ರತಿಭೆಯ ಚಿರಪರಿತ ಕಲಾವಿದ. ಪತ್ನಿ ಹರಿಣಾಕ್ಷಿ ಆರ್. ಕೋಟ್ಯಾನ್ ಹಾಗೂ ಏಕೈಕ ಸುಪುತ್ರ ರಂಜಿತ್ ಆರ್. ಕೋಟ್ಯಾನ್ ಅವರನ್ನೊಳಗೊಂಡು ಮುಂಬಯಿಯಲ್ಲಿ ನೆಲೆಯಾಗಿದ್ದು ಸದ್ಯ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವರು.

ಕಳೆದ ನವೆಂಬರ್‍ನಲ್ಲಿ ಕರ್ನಾಟಕ ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರು ಆಯೋಜಿಸಿರುವ ಭವ್ಯ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿ 2014 ಮತ್ತು 2015ರ ಪ್ರದಾನಿಸಿದ್ದು `ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ’ ಪ್ರಶಸ್ತಿ ವಿಭಾಗದ 2014ನೇ ಸಾಲಿನ ಕರ್ನಾಟಕ ರಾಜ್ಯದ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಿತ್ತು.


