ಮುಂಬಯಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುಕೂಟ ಉಡುಪಿ (ರಿ.) ಇದರ ವತಿಯಿಂದ 15ನೇ ವರ್ಷದ ದಿ| ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ಕೆಮ್ತೂರು ತುಳುನಾಟಕ ಸ್ಪರ್ಧೆಯು ಡಿ.20ರಿಂದ ಡಿ.28ರತನಕ ಪ್ರತೀ ದಿನ ಸಂಜೆ 6.30ಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.
ಹದಿನೈದನೇ ವರ್ಷದ ತುಳು ನಾಟಕ ಸ್ಪರ್ಧೆಗೆ ಈ ಬಾರಿ ಒಟ್ಟು ಹದಿನೆಂಟು ಪ್ರವೇಶಪತ್ರಗಳು ಬಂದಿದ್ದು, ಹೊರ ರಾಜ್ಯದ ಕಾಸರಗೋಡು ಹಾಗೂ ರಾಜ್ಯದಿಂದ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಮೂಡಬಿದ್ರೆ ಹಾಗೂ ಉಡುಪಿ ಪರಿಸರದ ತಂಡಗಳಿವೆ. ಉತ್ತಮ ಸಾಮಾಜಿಕ ಸಂದೇಶಗಳನ್ನು ಸಾರುವ ನಾಟಕ ಕೃತಿಗಳನ್ನು ಗಮನದಲ್ಲಿರಿಸಿಕೊಂಡು 9 ಅತ್ಯುತ್ತಮ ನಾಟಕಗಳಿಗೆ ಅವಕಾಶ ನೀಡಲಾಗಿದೆ. ವಿಜೇತ ತಂಡಗಳಿಗೆ ಶಾಶ್ವತ ಫಲಕ, ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ರೂ. 15,000/-, ರೂ. 10,000/-, ರೂ 7,000/-, ನಗದು ಬಹುಮಾನ ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ, ಬಾಲ ನಟ, ಹಾಗೂ ಬಾಲನಟಿ ಪ್ರತೀ ವಿಭಾಗಗಳಲ್ಲಿ ಪ್ರಥಮ ರೂ. 1,000/- ಮತ್ತು ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ.5,000/- ಹಾಗೂ ಹೊರರಾಜ್ಯದ ತಂಡಗಳಿಗೆ ರೂ.10,000/- ಭತ್ಯೆಯೊಂದಿಗೆ ಊಟ ಉಪಚಾರ ಹಾಗೂ ಉತ್ತಮ ಸೌಕರ್ಯಗಳನ್ನು ಒದಗಿಸಲಾಗುವುದು.
ಉದ್ಘಾಟನಾ ಸಮಾರಂಭ:
ಡಿ.20ರಂದು ಸಂಜೆ 6.00ಕ್ಕೆ ತುಳು ನಾಟಕ ಸ್ಪರ್ಧೆಯನ್ನು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು. ಉಡುಪಿ ಅಂಬಲಪಾಡಿ ಶ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ಪುರುಷೋತ್ತಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಪ್ರದರ್ಶನಗೊಳ್ಳಲಿರುವ 9 ನಾಟಕಗಳು:
ಡಿ.20ರಂದು ಸಂಜೆ 6.30ಕ್ಕೆ ತೃಪ್ತಿ ಕಲಾವಿದರು ಕುಡ್ಲ (ರಿ.) ಇವರಿಂದ `ಬದುಕುನೆಂಚ’ (ರಚನೆ :ಭರತ್ ಕುಮಾರ್ ಗಂಧಕಾಡು, ನಿರ್ದೇಶನ: ದೀಪಕ್ರಾಜ್ ಕುಡುಪು), ಡಿ.21ರಂದು ಸಂಜೆ 6.30ಕ್ಕೆ ಸನ್ನಿಧಿ ಕಲಾವಿದರು (ರಿ.) ಉಡುಪಿ ಇವರಿಂದ `ಮಾಯೆದ ಬೊಲ್ಪು’ (ರಚನೆ ಮತ್ತು ನಿರ್ದೇಶನ: ರವಿ ಕುಮಾರ್ ಕಡೆಕಾರ್), ಡಿ.22ರಂದು ಸಂಜೆ 6.30ಕ್ಕೆ ಕೂಡ್ದಿ ಕಲಾವಿದೆರ್ ಪೆರ್ಡೂರು ಇವರಿಂದ `ಫೈಲ್ ನಂ.ಪತ್ತೊಂಜಿ‘ (ಮೂಲ: ತುಮಕೂರು ಶಿವಕುಮಾರ್, ತುಳು: ಸತ್ಯ ಉಡುಪಿ, ನಿರ್ದೇಶನ: ಪಿ.ಪ್ರಭಾಕರ ಕಲ್ಯಾಣಿ), ಡಿ.23ರಂದು ಸಂಜೆ 6.30ಕ್ಕೆ ಕರಾವಳಿ ಕಲಾವಿದರು (ರಿ.) ಮಲ್ಪೆ ಉಡುಪಿ ಇವರಿಂದ `ಬಗ್ಗನ ಭಾಗ್ಯೊ’ (ರಚನೆ : ಗಂಗಾಧರ ಕಿದಿಯೂರು, ನಿರ್ದೇಶನ: ವಿಜಯ ಆರ್.ನಾಯಕ್ ಮಾರ್ಪಳ್ಳಿ), ಡಿ.24ರಂದು ಸಂಜೆ 6.30ಕ್ಕೆ ಭೂಮಿಗೀತಾ ಸಾಂಸ್ಕೃತಿಕ ವೇದಿಕೆ ಪಟ್ಲ ಇವರಿಂದ `ವಾರ್ಡ್ ನಂಬರ್ ಆಜಿ’ (ಕನ್ನಡ: ಡಿ.ಆರ್ ನಾಗರಾಜ್, ತುಳು: ಉದ್ಯಾವರ ನಾಗೇಶ್ ಕುಮಾರ್, ನಿರ್ದೇಶನ: ಸಂತೋಷ್ ನಾಯಕ್ ಪಟ್ಲ), ಡಿ.25ರಂದು ಸಂಜೆ 6.30ಕ್ಕೆ ಭೂಮಿಕಾ (ರಿ.) ಹಾರಾಡಿ ಇವರಿಂದ `ಅರಕ್ಕ್ದ ಗುಡ್ಡೆ’ (ಕನ್ನಡ: ಹೂಲಿ ಶೇಖರ, ತುಳು: ರವಿ ಎಸ್. ಪೂಜಾರಿ, ನಿರ್ದೇಶನ: ಬಿ.ಎಸ್ ರಾಮ್ ಶೆಟ್ಟಿ ಹಾರಾಡಿ), ಡಿ.26ರಂದು ಸಂಜೆ 6.30ಕ್ಕೆ ನಮ ತುಳುವೆರ್ ಕಲಾ ಸಂಘಟನೆ(ರಿ.) ನಾಟ್ಕದೂರು ಮುದ್ರಾಡಿ ಇವರಿಂದ `ಕತ್ತಲೆಗ್ ಪತ್ತ್ ತರೆ’ (ರಚನೆ: ಉದ್ಯಾವರ ನಾಗೇಶ್ ಕುಮಾರ್, ನಿರ್ದೇಶನ: ಸುಕುಮಾರ್ ಮೋಹನ್ ಮುದ್ರಾಡಿ), ಡಿ.27ರಂದು ಸಂಜೆ 6.30ಕ್ಕೆ ಸಂಗಮ ಕಲಾವಿದರು ಮಣಿಪಾಲ (ರಿ.) ಇವರಿಂದ `ವಾಲಿವಧೆ’ (ಮೂಲ: ಕುವೆಂಪು (ಶ್ರೀ ರಾಮಾಯಣ ದರ್ಶನಂ), ತುಳು: ದಿನೇಶ್ ಆಚಾರಿ, ನಿರ್ದೇಶನ: ಗಣೇಶ್ ಎಂ.), ಡಿ.28ರಂದು ಸಂಜೆ 6.30ಕ್ಕೆ ನವಸುಮ ರಂಗಮಂಚ (ರಿ.) ಕೊಡವೂರು ಇವರಿಂದ `ಶೂದ್ರ ತಪಸ್ವಿ‘ (ಮೂಲ: ಕುವೆಂಪು (ಶೂದ್ರ ತಪಸ್ವಿ), ತುಳು: ಎಂ.ಜಾನಕಿ ಬ್ರಹ್ಮಾವರ, ನಿರ್ದೇಶನ: ಬಾಲಕೃಷ್ಣ ಕೊಡವೂರು) ಪ್ರದರ್ಶನಗೊಳ್ಳಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಕೆಮ್ತೂರು ತುಳು ನಾಟಕ ಸ್ಪರ್ಧಾ ಸಮಿತಿ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

