ಮಂಗಳೂರು: ಯೆನೆಪೊಯ ವಿಶ್ವವಿದ್ಯಾನಿಲಯವು ಕ್ಯಾನ್ಸರ್ ಕುರಿತು ವ್ಯಾಪಕ ಜನ ಜಾಗೃತಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ ಮಂಗಳೂರು ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಕ್ಯಾನ್ಸರ್ ಜಾಗೃತಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ದೇರಳಕಟ್ಟೆಯಲ್ಲಿನ ಯೆನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.

ddpi-1

ತರಬೇತಿಯಲ್ಲಿ ಕ್ಯಾನ್ಸರ್ ಕಾಯಿಲೆ ಎಂದರೇನು? ಕಾರಣಗಳು, ಗುಣ ಲಕ್ಷಣಗಳು, ಕ್ಯಾನ್ಸರ್‍ನ ವಿವಿಧ ವರ್ಗಗಳು, ಪ್ರಾರಂಭದಲ್ಲಿ ಪತ್ತೆಹಚ್ಚುವ ವಿಧಾನ,ಚಿಕಿತ್ಸೆ ಹಾಗೂ ನಿಯಂತ್ರಣ ಕುರಿತು ಅನುಭವಿ ಸಂಪನ್ಮೂಲ ವ್ಯಕ್ತಿಗಳು ತರಬೇತಿಯನ್ನು ನಡೆಸಿಕೊಟ್ಟರು. ಮಧ್ಯಾಹ್ನದ ನಂತರದ ಅಧಿವೇಶನದಲ್ಲಿ ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಹಾಗೂ ಪ್ರಖ್ಯಾತ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಎಂ.ವಿಜಯಕುಮಾರ್‍ರವರು ಶಿಕ್ಷಕರೊಂದಿಗೆ ಸಂವಾದವನ್ನು ನಡೆಸಿಕೊಟ್ಟರು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ.ಸಾರ್ವಜಿನಿಕ ಶಿಕ್ಷಣ ಇಲಾಖೆಯ ಉಪ ವಿದ್ಯಾಂಗ ನಿರ್ದೇಶಕ(ಆಡಳಿತ)ರಾದ ವಾಲ್ಟರ್ ಎಚ್ ಡಿಮೆಲ್ಲೊರವರು ಕ್ಯಾನ್ಸರ್ ಕಾಯಿಲೆಯ ನಿಯಂತ್ರಣಕ್ಕಾಗಿ ಜಾಗ್ರತಿ ಮೂಡಿಸಲು ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಿರುವುದು ಶ್ಲಾಘನಾರ್ಹ ವಿಚಾರ. ಶಿಕ್ಷಕರ ಮುಖೇನ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಹಾಗೂ ಇಡೀ ಸಮುದಾಯಕ್ಕೆ ಇದರಿಂದ ಪ್ರಯೋಜನಕಾರಿ ಆಗುತ್ತದೆ. ಎಲ್ಲಾ ತಾಲೂಕುಗಳಲ್ಲಿಯೂ ಈ ಕಾರ್ಯಕ್ರಮವನ್ನು ತಮ್ಮ ಇಲಾಖೆ ಮುಖೇನ ಹಮ್ಮಿಕೊಳ್ಳಲು ಯೆನೆಪೋಯ ವಿಶ್ವವಿದ್ಯಾನಿಲಯಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

0411

ಕಾರ್ಯಕ್ರಮದಲ್ಲಿ ಗೌರಾವಾನ್ವಿತ ಅತಿಥಿಯಾಗಿ ಉಪಸ್ಥಿತರಿದ್ದ ಸುರುಮಿ ಪರ್ಹಾದ್ ಯೆನೆಪೋಯರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಎಮ್. ವಿಜಯಕುಮಾರ್‍ರವರು ತಮ್ಮ ವಿಶ್ವವಿದ್ಯಾನಿಲಯವು ಹಮ್ಮಿಕೊಂಡಿರುವ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಪ್ರಸ್ತುಕತೆ, ಪ್ರಯೋಜನಗಳು ಮತ್ತು ಕಾರ್ಯಕ್ರಮದ ಕುರಿತು ವಿವರಿಸಿ ಶಿಕ್ಷಕರ ಪಾತ್ರದ ಮಹತ್ವದ ಕುರಿತು ಒತ್ತಿ ಹೇಳಿದರು.

ಕಣ್ಣೂರು ಮತ್ತು ಕಲ್ಲಿಕೋಟೆ ವಿಶ್ವವಿದ್ಯಾನಿಲಯಗಳ ಮಾಜಿ ಉಪಕುಲಪತಿಗಳಾದ ಡಾ| ಅಬ್ದುಲ್ ರಹಿಮಾನ್, ಮಂಗಳೂರು ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಶಿಕ್ಷಣ ಸಂಯೋಜಕ ಉಸ್ಮಾನ್.ಜಿ , ಯೆನೆಪೋಯ ಕ್ಯಾನ್ಸರ್ ಕೇರ್ ಸೆಂಟರ್‍ನ ಕ್ಯಾನ್ಸರ್ ಪ್ರತಿಬಂಧಕ ವಿಭಾಗದ ಡಾ| ಇಬ್ರಾಹಿಂ ನಾಗನೂರ್, ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಶುಂಪಾಲರಾದ ಡಾ| ಆಶಾ ಪಿ. ಶೆಟ್ಟಿ, ವಿಶ್ವವಿದ್ಯಾನಿಲಯದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಸಂಯೋಜಕಿ ಡಾ| ಅಶ್ವಿನಿ ಡಿ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಕುಮಾರ್ ಮೆನನ್ ಸ್ವಾಗತಿಸಿದ್ದು, ಹೈಸ್ಕೂಲ್ ಶಿಕ್ಷಕರ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಸಂಯೋಜಕರಾದ ಡಾ| ಮಹಮ್ಮದ್ ಗುತ್ತಿಗಾರ್ ವಂದಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಡಾ.ಪ್ರಚೇತ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ತಾಲೂಕಿನ 102 ಶಾಲೆಗಳಿಂದ ಶಿಕ್ಷಕರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಡಾ. ಸಿದ್ಧರೂಢ ಶಿವಳ್ಳಿ, ಡಾ.ಪ್ರಜ್ಞಾ ಕಿಣಿ, ಡಾ.ಲಕ್ಷ್ಮೀನಾರಾಯಣ.ಎಸ್ ಮತ್ತು ಡಾ.ಪ್ರಭಾಕರ್ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ್ದರು.

By suddi9

Leave a Reply

Your email address will not be published. Required fields are marked *