ಬಂಟ್ವಾಳ: ಕಳೆದ ಕೆಲ ದಿನಗಳಿಂದ ಜಿಲ್ಲೆಯ ಜೀವನದಿ ನೇತ್ರಾವತಿ ಬರಡಾಗಿದೆ. ನದಿಯಲ್ಲಿ ನೀರಿಗಿಂತ ಮರಳು ಹೆಚ್ಚು ಕಂಡು ಬರುತ್ತಿದ್ದು ಮರಳುಗಾಡಿನಂತೆ ಭಾಸವಾಗುತ್ತಿದೆ. ಮಳೆಯ ನಿರೀಕ್ಷೆಯಲ್ಲಿ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರು ಬಿಡುಗಡೆ ಸ್ಥಗಿತಗೊಳಿಸಿರುವುದೇ ನದಿ ಬರಡಾಲು ಕಾರಣ. ಇದರಿಂದ ಮುಂದಿನ ದಿನಗಳಲ್ಲಿ ಮಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರ ಬಹುದೇ ಎನ್ನುವ ಆತಂಕ ಕಾಡಲು ಪ್ರಾರಂಭಿಸಿದೆ.

4 (1)

2 (2)

3 (2)
ಕಳೆದ ಜುಲೈ 5 ರಂದು ನೇತ್ರಾವತಿ ನದಿ ತುಂಬಿ ಬಂಟ್ವಾಳ ನೆರೆ ಆವೃತವಾಗಿತ್ತು. ಆದರೆ ಈ ಬಾರಿ ನದಿ ಸಂಪೂರ್ಣವಾಗಿ ಬರಡು ಭೂಮಿಯಂತಾಗಿದ್ದು ಕೃಷಿಕರು ಆತಂಕದಲ್ಲಿದ್ದಾರೆ. ಮಳೆಯನ್ನೇ ನಂಬಿ ಕೃಷಿಯನ್ನು ಮಾಡಿ ಬದುಕು ಸಾಗಿಸುವ ಇಲ್ಲಿನ ಕೃಷಿಕರು ಈ ಬಾರಿ ಯಾವ ರೀತಿಯಲ್ಲಿ ಜೀವನ ಸಾಗಿಸಬಹುದು ಎಂದು ಯೋಚನೆಯಲ್ಲಿದ್ದಾರೆ.
ಕಳೆದ ಮೇ ಅಂತ್ಯದವೆರಗೂ ನೀರಿನಿಂದ ತುಂಬಿ ತುಳುಕುತ್ತಿದ್ದ ನೇತ್ರಾವತಿ ದಿಢೀರ್ ಬರಡಾಗಿದೆ. ನದಿಯ ಒಂದು ಭಾಗದಲ್ಲಿ ಮಾತ್ರ ತೊರೆಯಂಥೆ ನೀರು ಹರಿಯುತ್ತಿದ್ದು ಉಳಿದ ಭಾಗ ಮರುಭೂಮಿಯಂತೆ ಕಂಡು ಬರುತ್ತಿದೆ. ಮಂಗಳೂರಿನ ಮಹಾಜನತೆಗೆ ಪೂರೈಸಲು ಇಷ್ಟು ನೀರು ಸಾಕೇ ಎನ್ನುವ ಆತಂಕ ಕಾಡಲು ಪ್ರಾರಂಭಿಸಿದೆ. ಜೂನ್ 5ರ ಬಳಿಕ ಮುಂಗಾರು ಕೇರಳ ಪ್ರವೇಶಿಸಿ ಬಳಿಕ ರಾಜ್ಯ ಕರಾವಳಿ ಪ್ರವೇಶಿಸುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಮಳೆಯ ನಿರೀಕ್ಷೆಯಲ್ಲಿ ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರು ತಡೆಹಿಡಿದಿದ್ದು ಮಳೆ ಪ್ರಾರಂಭವಾಗುತ್ತಿದ್ದಂತೆಯೇ ನೀರು ಬಿಡುಗಡೆ ಮಾಡುವ ಬಗ್ಗೆ ಸಂಸ್ಥೆ ನಿರ್ಧರಿಸಿತ್ತು. ಈ ಬಗ್ಗೆ ಪ್ರಕಟಣೆಯನ್ನು ಮಾಧ್ಯಮಗಳ ಮುಖಾಂತರ ಹೊರಡಿಸಿತ್ತು. ಆದರೆ ಮಂಗಾರು ಆರಂಭಗೊಂಡಿದ್ದರೂ ನಿರೀಕ್ಷೆಯಷ್ಟು ಮಳೆ ಬಾರದೇ ಇರುವುದರಿಂದ ನದಿಗೆ ಸದ್ಯ ಈ ಸ್ಥಿತಿ ಬಂದೊದಗಿದೆ. ಎಲ್ಲೆಲ್ಲು ಮರಳು, ಬಂಡೆ ಕಲ್ಲುಗಳೇ ಕಾಣ ಸಿಗುತ್ತಿವೆ.
ಇನ್ನು ಸಾಲದೆಂಬಂತೆ ಎತ್ತಿನಹೊಳೆ ನದಿ ತಿರುವು ಯೋಜನೆ ಆರಂಭವಾದದರೆ ಇಲ್ಲಿನ ಕೃಷಿಕರು ಏನು ಮಾಡಬೇಕು ಎನ್ನುವುದೇ ಪ್ರಶ್ನೆಯಾಗಿದೆ. ನೇತ್ರಾವತಿಯ ನೀರನ್ನೇ ನಂಬಿ ಬದುಕುವ ಮಂಗಳೂರು ಜನತೆ ಕುಡಿಯುವ ನೀರಿಗಾಗಿ ಪರದಾಡಬೇಕಾಗುವುದು ಕೂಡಾ ಸತ್ಯ….

By Suddi9

Leave a Reply

Your email address will not be published. Required fields are marked *