ಕೈಕಂಬ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಪೊಳಲಿ ಘಟಕದ ಉದ್ಘಾಟನೆ “ಯಕ್ಷಗಾನ ವೈಭವ-ಯಕ್ಷಗಾನ ಬಯಲಾಟ” ಹಾಗೂ ಬೊಟ್ಟಿಗೆರೆ ಪುರುಷೋತ್ತಮ ಪೂಂಜ ‘ಅಂಬುರುಹ’ ಕೃತಿ ಸಂಪುಟ ಬಿಡುಗಡೆಯ ಉದ್ಘಾಟನಾ ಕಾರ್ಯಕ್ರಮವು ಪೊಳಲಿಯಲ್ಲಿ ಭಾನುವಾರ 16ರಂದು ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 2.30ರಿಂದ ಸಂಜೆ 6ರವರೆಗೆ ಯಕ್ಷಗಾನ ಗಾನ ವೈಭವ ಮತ್ತು ಸಂಜೆ 7ರಿಂದ ಉದ್ಘಾಟನದ ಸಭಾ ಕಾರ್ಯಕ್ರಮ ನಡೆಯಲಿದೆ.
ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ವೇ. ಮೂ. ಲಕ್ಷ್ಮೀನಾರಾಯಾಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀ ವಿವೇಕ ಚೈತನ್ಯಾನಂದ ದಿವ್ಯ ಉಪಸ್ಥಿತಿಯಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಪೊಳಲಿ ಕ್ಷೇತ್ರದ ಅರ್ಚಕ ವೇ.ಮೂ. ಅನಂತ ಪದ್ಮನಾಭ ಭಟ್ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ಬ್ಯಾಂಕ್ ನ ಮುಖ್ಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಸಂಪುಟ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಶ್ರೀ ಕ್ಷೇತ್ರ ಪೊಳಲಿ ಆಡಳಿತ ಮುಕ್ತೇಸರ ಅಮುಂಜೆಗುತ್ತು ಡಾ| ಮಂಜಯ್ಯ ಶೆಟ್ಟಿ, ಕಟೀಲು 6 ಮೇಳಗಳ ಯಜಮಾನ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಶ್ರೀ ಕ್ಷೇತ್ರ ಪೊಳಲಿಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಉದ್ಯಮಿ ಭುವನೇಶ್ ಪಚಿನಡ್ಕ, ಯಕ್ಷಕಲಾ ಸಂಚಾಲಕ ವೆಂಕಟೇಶ್ ನಾವಡ ಪೊಳಲಿ ಭಾಗವಹಿಸಲಿದ್ದಾರೆ. ಸಂಸ್ಕರಣಾ ಹಾಗೂ ಅಭಿನಂದನಾ ಭಾಷಣವನ್ನು ನವನೀತ ಶೆಟ್ಟಿ ಕದ್ರಿ ಮಾಡಲಿದ್ದಾರೆ. ಕಟೀಲು ಸಿದ್ಧ ರಂಗನಾಥ್ ರಾವ್ ಕೃತಿ ಪರಿಚಯವನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಭಾಗವತರಾದ ಶ್ರೀನಿವಾಸ ದಾಸ ಬೆಳ್ಳೂರು ಹಾಗೂ ಹಿರಿಯ ಯಕ್ಷಗಾನ ಕಲಾವಿದ ದೇವಪ್ಪ ದೇವಾಡಿಗ ಬೆಳ್ಳೂರು ಇವರುಗಳು ಸನ್ಮಾನಗೊಳ್ಳಲಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ದಿ.ಪೊಳಲಿ ಲೋಕಯ್ಯ ಅವರ ಸಂಸ್ಕರಣೆ ನಡೆಯಲಿದೆ. ನಂತರ ಪ್ರಸಿದ್ಧ ಕಲಾವಿದರಿಂದ “ಶಶಿಪ್ರಭಾ ಪರಿಣಯ” ಎಂಬ ಯಕ್ಷಗಾನ ಬಯಲಾಟ ಜರಗಲಿದೆ.

