ಬಂಟ್ವಾಳ:ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಶೈಕ್ಷಣಿಕ ಶುಲ್ಕದ ಜೊತೆಗೆ ಸರ್ಕಾರವು ಕ್ರೀಡಾ ಶುಲ್ಕ ವಸೂಲಿ ಮಾಡುತ್ತಿದ್ದು, ಪ್ರತೀ ಗ್ರಾಮ ಪಂಚಾಯಿತಿನಲ್ಲಿ ಕೂಡಾ ಕ್ರೀಡಾ ಶುಲ್ಕ ವಸೂಲಾತಿಯಾಗುತ್ತಿದೆ. ಒಟ್ಟು 125ಕೋಟಿಗೂ ಮಿಕ್ಕಿ ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಳುಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿ ನೀಡುವುದಕ್ಕಾಗಿ ಗ್ರಾಮೀಣ ಮಟ್ಟದಿಂದಲೇ ಸರ್ಕಾರವು ಅನುದಾನ ವಿನಿಯೋಗಿಸಬೇಕು ಎಂದು ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ. ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರಿಗಾಗಿ ಶನಿವಾರ ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ಮನ್‍ದೇವ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕ್ರೀಡಾ ನೀತಿ ಪುನರ್‍ರಚಿಸುವ ಮೂಲಕ ಪ್ರತಿಭಾನ್ವಿತ ಕ್ರೀಡಾಳುಗಳ ಬೆಳವಣಿಗೆಗೆ ಮುಂದಾಗಿದ್ದಾರೆ ಎಂದು ಅವರು ತಿಳಿಸಿದರು. ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮರಾಜ ಬಲ್ಲಾಳ್ ಮಾವಂತೂರು, ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ, ಸಂಗಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ ಪೂಜಾರಿ ಮತ್ತಿತರರು ಶುಭ ಹಾರೈಸಿದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಬಾಳ್ತಿಲ, ಕೋಶಾಧಿಕಾರಿ ಅಖಿಲೇಶ್ ಶೆಟ್ಟಿ, ನೋಡೆಲ್ ಅಧಿಕಾರಿ ವಿಠಲ ನಾಯ್ಕ, ಸಮೂಹ ಸಂಪನ್ಮೂಲ ವ್ಯಕ್ತಿ ಡಿ.ಕುಮಾರ್, ಉದ್ಯಮಿ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ, ಶಾಲಾ ಸಂಚಾಲಕ ವಿಜಯ ಕುಮಾರ್ ಚೌಟ, ಪತ್ರಕರ್ತ ಶಶೀಂದ್ರ ಮೂಡುಬಿದ್ರೆ, ವಿದ್ಯಾರ್ಥಿ ನಾಯಕ ಶ್ರೀನಿತ್ ಮತ್ತಿತರರು ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಗುರುನಾಥ್ ಬಾಗೇವಾಡಿ ಪ್ರಾಸ್ತಾವಿಕ ಮಾತನಾಡಿ, ಕಳೆದ 1956ರಲ್ಲಿ ಹೈದರಾಬಾದ್‍ನಲ್ಲಿ ಆರಂಭಗೊಂಡ ಬಾಲ್ ಬ್ಯಾಡ್ಮಿಂಟನ್ ಪ್ರಸಕ್ತ ದಕ್ಷಿಣ ಭಾರತದಲ್ಲೇ ಪ್ರಮುಖ ಕ್ರೀಡೆಯಾಗಿ ಗುರುತಿಸಿಕೊಂಡಿದೆ ಎಂದರು. ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೊ ಸ್ವಾಗತಿಸಿ, ಶಿಕ್ಷಕಿ ಮೋಹಿನಿ ವಂದಿಸಿದರು. ಶಿಕ್ಷಕ ರಘುನಾಥ್ ಕಾರ್ಯಕ್ರಮ ನಿರೂಪಿಸಿದರು.
