ಕಲ್ಲಡ್ಕ: ಪ್ರದೀಪ್ತ ಎಂದರೆ ಉದ್ಧೀಪನ. ಆ ದೀಪದ ಉದ್ಧೀಪನವಾದಂತೆ ವಿದ್ಯಾರ್ಥಿಗಳ ಭವಿಷ್ಯವು ಬೆಳೆಯಬೇಕು. ಅದು ಬಾಳಿಗೆ ಬೆಳಕಾಗಬೇಕು. ಅವಕಾಶ ಸದುಪಯೋಗಪಡಿಸಿಕೊಂಡು ಉತ್ತಮ ಕಾರ್ಯ ಚಟುವಟಿಕೆಗಳಲ್ಲಿ ಮುನ್ನುಗ್ಗಬೇಕು ಎಂದು ತುಳು ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ಚಿ. ರಮೇಶ್ ಕಲ್ಲಡ್ಕ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ಕಾಲೇಜಿನ 2016-17ನೇ ಶೈಕ್ಷಣಿಕ ವರ್ಷದ ಪ್ರದೀಪ್ತ ಸಾಂಸ್ಕೃ ತಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಗುರುವಿನ ಬಗ್ಗೆ ವಿನಯ, ವಿಧೇಯತೆ, ಪರಿಶ್ರಮ, ಶಿಸ್ತು, ಸಮಯಪಾಲನೆ ಈ 5 ಅಂಶಗಳಿದ್ದಲ್ಲಿ ಆ ವಿದ್ಯಾರ್ಥಿ ಮುನ್ನಡೆಯಲು ಸಾಧ್ಯ ಎಂದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶಿಲ್ಪಾ ಬಿ.ಸಿ.ರೊಡ್, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‍ಕಟ್ಟೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂತಿಮ ವಿಭಾಗದ ಬಿಕಾಂ ಹಾಗೂ ಬಿಎ ವಿದ್ಯಾರ್ಥಿಗಳಿಂದ ಸಮರಸವೇ ಜೀವನ ಎಂಬ ಸಂದೇಶದಡಿಯಲ್ಲಿ ಸಾಂಸ್ಕೃತಿಕ ವೈಭವಗಳಾದ ನೃತ್ಯ, ನಾಟಕ, ಪ್ರಹಸನ, ಹಾಡು ಮುಂತಾದ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.
ವಿಶೇಷವಾಗಿ ವಿದ್ಯಾರ್ಥಿಗಳು ಕಣ್ಣಿಗೆ ಪಟ್ಟಿ ಕಟ್ಟಿ ನೃತ್ಯ ಮಾಡಿದ ದೃಶ್ಯ ಎಲ್ಲರ ಗಮನ ಸೆಳೆಯಿತು. ಅಲ್ಲದೇ ಶಿಶು ಮಂದಿರದ ಮಕ್ಕಳಿಂದ ಸಾಮರಸ್ಯ ಸಂದೇಶ ಸಾರುವ ವಚನವನ್ನು ಹೇಳಲಾಯಿತು. ಶಿಶು ಮಂದಿರದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಜೋಡಿಸಿದ್ದು ಅದ್ಭುತವಾಗಿತ್ತು.ಸಂಘದ ನಿರ್ದೇಶಕಿ ವಿನುತಾಲಕ್ಷ್ಮಿ ಸ್ವಾಗತಿಸಿ, ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹನಿರ್ದೇಶಕಿ ಶೈಲಜಾ ಸಹಕರಿಸಿದರು.

