ಬಂಟ್ವಾಳ:ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕಿನ ಗಡಿ ಭಾಗದಲ್ಲಿರುವ ನೈನಾಡು ಗ್ರಾಮೀಣ ಸರ್ಕಾರಿ ಪೌಢಶಾಲೆಗೆ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸತತ ಶೇ.100 ಫಲಿತಾಂಶ ದೊರೆತ ಹಿನ್ನೆಲೆಯಲ್ಲಿ ಇಲ್ಲಿನ ಎಂಟನೇ ತರಗತಿ ಪ್ರವೇಶ ಪಡೆಯಲು ವಿವಿಧೆಡೆಯಿಂದ ಹೊಸ ವಿದ್ಯಾರ್ಥಿಗಳು ಧಾವಿಸುತ್ತಿರುವುದು ಕಂಡು ಬಂದಿದೆ. ಈ ಹಿಂದೆ ಒಟ್ಟು 24 ವರ್ಷಗಳ ಅವಧಿಯಲ್ಲಿ ಒಂದು ಬಾರಿ ಶೇ.100 ಫಲಿತಾಂಶ ಮತ್ತು ಪ್ರತೀ ಬಾರಿ ತಲಾ ಶೇ.90 ಫಲಿತಾಂಶ ಕಾಯ್ದುಕೊಂಡಿದ್ದ ಶಾಲೆಯು ಪ್ರಸಕ್ತ ಎರಡು ವರ್ಷಗಳಲ್ಲಿ ಸತತ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಖಾಸಗಿ ಶಾಲೆಗೆ ಪೈಪೋಟಿ ನೀಡುತ್ತಿದೆ.
ಇಲ್ಲಿನ ಒಟ್ಟು 38 ಮಂದಿ ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿನಿ ನಿಶ್ಮಿತಾ ಎನ್. ಒಟ್ಟು 596 ಅಂಕ ಗಳಿಸುವ ಮೂಲಕ ಶೇ.96.36 ಫಲಿತಾಂಶ ದಾಖಲಿಸಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಉಳಿದಂತೆ ನಾಲ್ವರು ವಿದ್ಯಾರ್ಥಿಗಳು ಉನ್ನತ ಶ್ರೇಣಿ, ಒಂಭತ್ತು ಮಂದಿ ಪ್ರಥಮ ಶ್ರೇಣಿ ಹಾಗೂ ಇತರ ವಿದ್ಯಾರ್ಥಿಗಳು ಶೇ.60 ಫಲಿತಾಂಶ ದಾಖಲಿಸಿದ್ದಾರೆ. ಈ ನಡುವೆ ನಿಶ್ಮಿತಾ, ನವೀನ, ಶ್ರಾವ್ಯ, ಸಂಗೀತ, ಮಲ್ಲಿಕಾ ಹೀಗೆ ಐವರು ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125ರಲ್ಲಿ 125 ಅಂಕ ಗಳಿಸುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.
ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು, ಮೂರ್ಜೆ , ಇರ್ವತ್ತೂರು, ನೇರಳಕಟ್ಟೆ, ಮೂಡುಪಡುಕೋಡಿ ಮಾತ್ರವಲ್ಲದೆ ಬೆಳ್ತಂಗಡಿ ತಾಲ್ಲೂಕಿನ ಬಜಿರೆ ಮತ್ತಿತರ ಕಡೆಗಳಿಂದಲೂ ದಾಖಲಾತಿಗೆ ಹೊಸ ವಿದ್ಯಾರ್ಥಿಗಳು ಉತ್ಸಾಹದಿಂದ ಆಗಮಿಸುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ವರ್ಷ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ದೃಶ್ಯ.

ಈಗಾಗಲೇ ಸುಮಾರು 25ಕ್ಕೂ ಮಿಕ್ಕಿ ಮಂದಿ ದಾಖಲಾತಿ ಪಡೆದಿದ್ದು, ಇಲ್ಲಿಗೆ ಸರ್ಕಾರಿ ಬಸ್ ಸೌಲಭ್ಯ ಮತ್ತು ವಿದ್ಯಾರ್ಥಿನಿಲಯ ಇಲ್ಲದಿರುವುದು ದೂರದ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿಂದೆ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಸಂಚಾರ ರಾಜಕೀಯ ಕಾರಣದಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ಗಂಟೆಗೊಮ್ಮೆ ಬರುವ ಖಾಸಗಿ ಬಸ್ಸನ್ನೇ ಅವಲಂಬಿಸಬೇಕಿದ್ದು, ನೈನಾಡು ಪೇಟೆಯಿಂದ ಶಾಲೆತನಕ ಗುಡ್ಡವೊಂದರ ನಡುವೆ ಹದಗೆಟ್ಟು ಹೋಗಿರುವ ರಸ್ತೆಯಲ್ಲಿ ಪ್ರತಿದಿನ ವಿದ್ಯಾರ್ಥಿಗಳು ಪಾದಯಾತ್ರೆ ಮಾಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಶಾಲೆಯ ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕೆ ಸೀಮಿತಗೊಳ್ಳದೆ ಜಿಲ್ಲಾ ಮಟ್ಟದ ಕಬಡ್ಡಿ, ಕೊಕ್ಕೊ ಮತ್ತು ಓಟ ಮತ್ತಿತರ ಕ್ರೀಡೆಯಲ್ಲಿಯೂ ಮಿಂಚುತ್ತಿದ್ದಾರೆ. ತಾಲ್ಲೂಕು ಮಟ್ಟ ಮತ್ತು ದಸರಾ ಕ್ರೀಡಾಕೂಟದಲ್ಲಿ ಒಟ್ಟು 32ಕ್ಕೂ ಮಿಕ್ಕಿ ಬಹುಮಾನ ಗೆದ್ದುಕೊಂಡಿದೆ. ಮಾತ್ರವಲ್ಲದೆ ಶಾಲಾ ಕೈತೋಟ, ಸುಸಜ್ಜಿತ ಗ್ರಂಥಾಲಯ, ರೂ 80ಸಾವಿರ ವೆಚ್ಚದ ಪ್ರತ್ಯೇಕ ಪ್ರಯೋಗಾಲಯ, ರೂ 30ಸಾವಿರ ಮೌಲ್ಯದ ಕ್ರೀಡಾ ಸಾಮಾಗ್ರಿ ಹೊಂದಿದ್ದು, ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲೂ ಬಹುಮುಖ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದಾರೆ. ಶಿಕ್ಷಣದ ಜೊತೆಗೆ ವೃತ್ತಿ ಮಾರ್ಗದರ್ಶನ ಶಿಬಿರ, ಪರೀಕ್ಷಾ ಪೂರ್ವ ತರಬೇತಿ, ಆರೋಗ್ಯ ಮಾಹಿತಿ, ಸ್ವಾಸ್ಥ್ಯ ಸಂಕಲ್ಪ ಹೀಗೆ ವಿವಿಧ ತರಬೇತಿಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ನೀಡುವುದು ಇಲ್ಲಿನ ಇನ್ನೊಂದು ವಿಶೇಷತೆ.
ಈಗಾಗಲೇ ಇಲ್ಲಿನ ಶೈಕ್ಷಣಿಕ ಗುಣಮಟ್ಟಕ್ಕೆ ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ ಲಭಿಸಿದ್ದು, ಶಾಲೆಯ ಬೆಳವಣಿಗೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯ ಧ್ಯಕ್ಷ ಇನಾಸ್ ರಾಡ್ರಿಗಸ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಕೂಡಾ ಶ್ರಮಿಸುತ್ತಿದೆ. ಮಾತ್ರವಲ್ಲದೆ ಶಿಕ್ಷಕರಾದ ಪ್ರಕಾಶ ನಾಯಕ್, ಬಿ.ರಮಾ ಮೋಹನ್, ಹೇಮಣ್ಣ ನಿಂಬಣ್ಣವರ್, ವಿದ್ಯಾಶ್ರೀ, ದೈಹಿಕ ಶಿಕ್ಷಕ ವಾಸು ಎಂ. ಇವರು ಶೈಕ್ಷಣಿಕ ಫಲಿತಾಂಶಕ್ಕೆ ಶ್ರಮಿಸುತ್ತಿದ್ದಾರೆ ಎಂದು ಮುಖ್ಯಶಿಕ್ಷಕ ಅಶೋಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಚಿತ್ರ: ಎಂ.ಕೆ.ಶ್ರೀಯಾನ್ ರಾಯಿ
