ಮುಂಬಯಿ : ಬಿಲ್ಲವ ಸಮಾಜ ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ. ನಮ್ಮಲ್ಲಿ ಜನ ಮತ್ತು ಹಣ ಬಲ ಹೊಂದಿರುವ ಮುಂದಾಳುಗಳಿದ್ದೂ ದೀರ್ಘಕಾಲದ ಆಶಯದ ಶೈಕ್ಷಣಿಕ ಕ್ಷೇತ್ರದ ನಿರ್ಲಕ್ಷವೇ ಪ್ರಾಯಶಃ ಇದಕ್ಕೆ ಪ್ರಧಾನ ಕಾರಣ ಆಗಿರ ಬಹುದು. ಸಮಾಜದಲ್ಲಿ ಸುಶಿಕ್ಷಿತ, ಸ್ವದ್ಯಮಿಗಳ ಬಲವರ್ಧನೆ ಆದರೆ ಇವೆಲ್ಲಕ್ಕೂ ಸೂಕ್ತ ಉತ್ತರ, ಪರಿಹಾರ ಕಂಡುಕೊಳ್ಳ ಬಹುದು ಎನ್ನುವ ಉದ್ದೇಶದಿಂದ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಸಂಸ್ಥೆಯನ್ನು ರೂಪಿಸಿದ್ದೇವೆ. ಇದು ಸಮಗ್ರ ಬಿಲ್ಲವರ ಕಲ್ಪವೃಕ್ಷ ಆಗಲಿದೆ ಎನ್ನುವ ಆಶಯ ನನ್ನದು ಎಂದು ಬಿಲ್ಲವ ಜಾಗ್ರತಿ ಬಳಗ ಇದರ ಅಧ್ಯಕ್ಷರೂ, ಬಿಸಿಸಿಐ ಸಂಸ್ಥೆಯ ಸ್ಥಾಪಕ ರೂವಾರಿ ಮತ್ತು ಸಂಸ್ಥಾಪಕಧ್ಯಕ್ಷ ಎನ್.ಟಿ ಪೂಜಾರಿ ಅಭಿಪ್ರಾಯ ಪಟ್ಟರು.
ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ ಬಿಲ್ಲವ ಸಮುದಾಯವು ಸದ್ಯ ರಾಷ್ಟ್ರವನ್ನಾಳುವಷ್ಟು ಶಕ್ತಿಯುತ ನಾಯಕರನ್ನು ಹೊಂದಿದೆ. ಆದರೆ ನಮ್ಮಲ್ಲಿನ ಬಹುಸಂಖ್ಯಾತ ಯುವಜನತೆ ಒಂದಲ್ಲಾಒಂದು ಕಾರಣಗಳಿಂದ ಶಿಕ್ಷಣ, ಉದ್ಯೋಗ, ಉದ್ಯಮ, ನಾಯಕತ್ವ ವಂಚಿತರಾಗಿ ಸಮುದಾಯದ ಮುನ್ನಡೆ ಯೋಚಿಸಿದಷ್ಟು ಮಟ್ಟಿಗೆ ಅಭಿವೃದ್ಧಿ ಕಂಡಿಲ್ಲ ಇದನ್ನು ಸಮರ್ಥವಾಗಿ ಎದುರಿಸಲು ಬಿಸಿಸಿಐ ಸಂಸ್ಥೆಯು ಅವಿರತವಾಗಿ ಶ್ರಮಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಪಣತೊಡಲಿದೆ ಎಂದು ಎನ್.ಟಿ ಪೂಜಾರಿ ಪತ್ರಕರ್ತರ ಸಂವಾದಕ್ಕೆ ಉತ್ತರಿಸಿ ತಮ್ಮ ಯೋಚನೆ ಮತ್ತು ಯೋಜನೆಗಳನ್ನು ಭಿತ್ತರಿಸಿದರು.
ಪ್ರೆ: ಜಾಗತಿಕವಾಗಿ ಬೆಳೆದ ಪ್ರಸಕ್ತ ಉದ್ಯಮ, ಯುವಜನತೆಯನ್ನು ತಮ್ಮ ನೇತೃತ್ವದ ಬಿಸಿಸಿಐ ಸಂಸ್ಥೆ ಯಾವ ರೀತಿ ಪ್ರೋತ್ಸಹಿಸ ಬಲ್ಲದು…?
ಉ: ಪ್ರಸಕ್ತ ಪೀಳಿಗೆಯ ಮುಂದೆ ನಮ್ಮ ಶಿಕ್ಷಣಜ್ಞಾನವು ಅಜಗಜಾಂತರದ ವ್ಯತ್ಯಾಸವಾಗಿ ಪರಿಣಮಿಸುವುದರಿಂದ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಾವು ಎಷ್ಟೂ ತಿಳಿದಷ್ಟೂ ಕಡಿಮೆಯೇ… ಇಂದಿನ ಯುವ ಜನತೆ ಅದೆಷ್ಟೋ ಅರಿವನ್ನು ಕೈಮುಷ್ಠಿಯಲ್ಲಿನ ಮೊಬಾಯ್ಲ್, ಐಪ್ಯಾಡ್ ಮುಖೇನ ತಿಳಿಯುವ ಯುಗದಲ್ಲಿ ನಮ್ಮಲ್ಲಿನ ನುರಿತ, ಅನುಭವೀ ಮೇಧಾವಿಗಳ ಸಲಹೆಸೂಚನೆಗಳನ್ನೀಡಿ ಉದ್ಯಮದ ಅರಿವು ಮೂಢಿಸಿ ಯುವಜನತೆಯನ್ನು ಬೆಂಬಲಿಸಲಿದ್ದೇವೆ.
ಪ್ರೆ: ಬಿಸಿಸಿಐಯೂ ಕೂಡಾ ಕೇವಲ ವಿಚಾರ ಸಂಕಿರಣ, ಸಂವಾದ, ಪ್ರವಾಸ, ಸನ್ಮಾನಗಳಿಗೆನೇ ಸೀಮಿತವಾಗ ಬಲ್ಲದೇ…?
*ಖಂಡಿತವಾಗಿಯೂ ಇಲ್ಲ, ಹಿರಿಕಿರಿಯ ಮುಂದಾಳುಗಳ, ಯುವ ಜನತೆಯ ಉದ್ಯಮ ಜ್ಞಾನೋದಯದ ದೃಷ್ಟಿಯಿಂದ ವಿಚಾರ ಸಂಕಿರಣ, ಸಂವಾದ, ಬಿಝಿನೆಸ್ ಟೂರ್ಸ್ ಅನಿವಾರ್ಯವೇ ಸರಿ. ಅವರಲ್ಲಿ ಗುರುತರ ಸೇವೆ ಹಾಗೂ ಪ್ರತಿಭೆಗಳನ್ನು ಪ್ರೋತ್ಸಹಿಸುವ ಉದ್ದೇಶದಿಂದ ವಾಷರ್ಿಕ ಪುರಸ್ಕಾರಕ್ಕೆ ಮಾತ್ರ ಆದ್ಯತೆ ನಮ್ಮದಾಗಿದೆ.
ಪ್ರೆ: ಬಿಸಿಸಿಐ ಪದಾಧಿಕಾರಿಗಳ ಆಯ್ಕೆಯಲ್ಲಿ ಒಂದು ಬಳಗದ ಬಿಲ್ಲವರಿಗೆ ಮಾತ್ರ ಪ್ರಾಶಸ್ತ್ಯ ಕೊಡಲಾಗಿದೆ
ಅನಿಸುತ್ತಿಲ್ಲವೇ…?
* ಇದು ತಪ್ಪು ಗೃಹಿಕೆ…! ಬಿಲ್ಲವರಲ್ಲಿನ ಅನೇಕ ಸಂಸ್ಥೆಗಳ ಸದಸ್ಯರ ವಿಶ್ವಾಸಮತದಿಂದಲೇ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಸದ್ಯ ನಮ್ಮಲ್ಲಿ ಉಪಸರ್ಗ ಎನ್ನುವುದೇ ಇಲ್ಲ. ಏನಿದ್ದರೂ ಏಕತೆಯ ಮುನ್ನಡೆ ಬಿಲ್ಲವರದ್ದಾಗಿದೆ. ಇದು ಬಿಸಿಸಿಐನ ಆದಿ ಆಗಿರುವುದರಿಂದ ವಿಸ್ಕೃತವಾಗಿ ನಾಡಿನ ಎಲ್ಲರನ್ನೂ ಒಗ್ಗೂಡಿಸುವ ಆಯ್ಕೆ ಕಷ್ಟಕರ ಆಗಿರ ಬಹುದು. ಭವಿಷ್ಯತ್ತಿನ ದಿನಗಳಲ್ಲಿ ಸರ್ವರಿಗೂ ಅರ್ಹತೆಗನುಗುಣವಾಗಿ ಸ್ಥಾನಮಾನ ನೀಡಿ ಸಂಸ್ಥೆಯನ್ನೂ ಸಮಾಜವನ್ನೂ ಸಮಾನವಾಗಿ ಮುನ್ನಡೆಸಲಾಗುವುದು.
ಪ್ರೆ: ಯುವ ಪ್ರತಿಭಾನ್ವಿತರಿಗೆ ಯಾವ ರೀತಿಯ ಮನ್ನಣೆ ಕೊಡುವಿರಿ…?
*ಬಿಸಿಸಿಐ ಉದ್ದೇಶವೇ ಯುವಜನತೆಯ ಪ್ರೋತ್ಸಾಹ. ನಮ್ಮಲ್ಲಿನ ಅನೇಕರು ವಿಶ್ವವ್ಯಾಪಿಯಾಗಿ ಪಸರಿಸಿ ಸ್ವಉದ್ಯಮಿಗಳಾಗಿ ತೆರೆಮರೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಅವರ ಸಂಪರ್ಕ ಸಾಧಿಸಿ ಅವಲ್ಲಿನ ಅರಿವಿನ ಅನುಭವವನ್ನು ಹಂಚಿಕೊಳ್ಳುವಲ್ಲಿ ಸಹಮಿಲನಗಳನ್ನು ಕೈಗೊಂಡು ಪ್ರೇರೆಪಿಸಲಿದ್ದೇವೆ.
ಪ್ರೆ: ಯುವೋದ್ಯಮಿ ಆಗಿರುವ ತಾವು ಬಿಸಿಸಿಐ ಸಂಸ್ಥೆಯನ್ನು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸಲು
ಇಪ್ಛಿಸುವಿರಿ…?
*ನಮ್ಮಲ್ಲಿನ ಮುಂದಾಳುಗಳು ತಮ್ಮದೇ ಸ್ಥಾನಮಾನದ ಬಗ್ಗೆಯೇ ಚಿಂತಿತರಾಗಿರುವ ಕಾರಣ ಉತ್ತರಾಧಿಕಾರಿಗಳ ಚಿಂತೆ ನಡೆಸಿಲ್ಲ. ಯುವ ಜನತೆ ಅವರಿಗಿಂತ ಸಾವಿರಪಾಲು ಪ್ರತಿಭಾನ್ವಿತರಾಗಿದ್ದರೂ ಅವರ ಪ್ರತಿಭೆಗೆ ಮಾನ್ಯತೆ ಸಿಗದಿರುವುದು ಸಮಾಜದ ದೊಡ್ಡ ದುರಂತ. ಇಂತಹ ಮನೋಭಾವ ದೂರ ಸರಿದಾಗಲೇ ಪ್ರಸಕ್ತ ಯುವಜನತೆಯಲ್ಲಿ ಹೊಸ ಹುಮ್ಮಸ್ಸು ಮೂಡಬಹುದು. ಆ ನಿಟ್ಟಿನಲ್ಲಿ ಶ್ರಮಿಸಿ ಸಮಾಜಕ್ಕೇನಾದರೂ ಒಳಿತು ಮಾಡುವ ಆಶಯ ಹೊಂದಿದ್ದೇನೆ. ಹಿರಿಯರು ಪ್ರೋತ್ಸಾಹಿಸಿ ಕಿರಿಯರು ಫಲಾನುಭ ಪಡೆಯಲಿಪ್ಚಿಸಿದರೆ ಬಿಸಿಸಿಐಯನ್ನು ಮೇರು ಸಂಸ್ಥೆಯನ್ನಾಗಿಸುವ ಸಂಕಲ್ಪ ಹೊಂದಿದ್ದೇನೆ.
ಪ್ರೆ: ಬಿಸಿಸಿಐ ಮುನ್ನಡೆಗೆ ಬಿಲ್ಲವರ ಮಹಾ ಮಂಡಲ, ಅಖಿಲ ಭಾರತ ಬಿಲ್ಲವರ ಯೂನಿ ಯಾನ್, ಬಿಲ್ಲವರ ಅಸೋಶಿಯೇಶನ್ ಗಳಂತಹ ಸಂಸ್ಥೆಗಳ ಪಾತ್ರ ಮತ್ತು ಸಹಯೋಗ…?
*ಇವೆಲ್ಲವೂ ಬಿಲ್ಲವ ಸಮುದಾಯದ ಏಳಿಗೆಗಾಗಿಯೇ ಶ್ರಮಿಸುತ್ತಿರುವ ಸಂಸ್ಥೆಗಳು. ಇವರೆಲ್ಲರ ವ್ಯಾಪಕ ಬೆಂಬಲ ಬಿಸಿಸಿಐಗೆ ಇದೀಗಲೇ ಲಭಿಸಿದ್ದು, ಈ ಸಂಸ್ಥೆಗಳ ಮುಖ್ಯಸ್ಥರುಗಳ ಉತ್ತೇಜನದಿಂದಲೇ ಬಿಸಿಸಿಐ ಸೇವಾರ್ಪಣೆಗೆ ಸನ್ನದ್ಧಾಗಿದೆ.
ಪ್ರೆ: ಬಿಸಿಸಿಐ ಸದ್ಯ ಎಷ್ಟು ಸದಸ್ಯತ್ವ ಹೊಂದಿದೆ…? ಅದನ್ನು ಎಷ್ಟರತ್ತ ಬೆಳೆಸುವ ಆಶಯ ಹೊಂದಿರುವಿರಿ…?
*ಸದ್ಯ ಒಂದು ತಿಂಗಳಲ್ಲಿ ಸುಮಾರು 300 ಸದಸ್ಯತ್ವ ನೋಂದಣಿ ಆಗಿದೆ. ವರ್ಷದೊಳಗೆ 1000 ಸದಸ್ಯತ್ವ ಹೊಂದುವ ನಿರೀಕ್ಷೆಯಲ್ಲಿದ್ದೇವೆ. ತದನಂತರ ಅಲ್ಲಲ್ಲಿ ಬಿಸಿಸಿಐನ ಚ್ಯಾಪ್ಟರ್ಗಳನ್ನು ರಚಿಸಿ ರಾಷ್ಟ್ರವ್ಯಾಪಿಯಾಗಿ ಸಂಸ್ಥೆಯನ್ನು ವ್ಯವಸ್ಥಿತವಾಗಿ ಬೆಳೆಸಲಿದ್ದೇವೆ.
ಎನ್.ಟಿ ಪೂಜಾರಿ ತಮ್ಮ ದಕ್ಷ ನಾಯಕತ್ವದಲ್ಲಿ ಬಿಸಿಸಿಐನ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಉಪ ಕಾರ್ಯಾಧ್ಯಕ್ಷರುಗಳಾದ ಡಿ.ಎನ್ ಸುವರ್ಣ, ಎಂ.ಸುಸಿರ್ ಕುಮಾರ್, ಡಿ.ಬಿ ಅವಿೂನ್, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರುಗಳಾದ ಚಂದಯ ಬಿ.ಕರ್ಕೇರ, ಹರೀಶ್ ಜಿ. ಅವಿೂನ್, ಪುರುಷೋತ್ತಮ ಎಸ್.ಕೋಟ್ಯಾನ್, ಅಶ್ಮಿತ್ ಬಿ.ಕುಳಾಯಿ, ಭರತ್ ಎಸ್.ಪೂಜಾರಿ, ಗಂಗಾಧರ್ ಎನ್. ಅವಿೂನ್ ಕರ್ನೆರೆ, ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ.ಪೂಜಾರಿ ಸೇವೆ ಸಲ್ಲಿಸುತ್ತಿದ್ದಾರೆ.
ಎನ್.ಟಿ ಪೂಜಾರಿ ಅವರು ಮೂಲತ ಉಡುಪಿ ಜಿಲ್ಲೆಯ ಕುಂದಾಪುರ ಗುಜ್ಜಾಡಿ ನಿವಾಸಿ ಆಗಿದ್ದಾರೆ. ತಿಮ್ಮ ಪೂಜಾರಿ ಮತ್ತು ತುಂಗಾ ಪೂಜಾರಿ ದಂಪತಿ ಸುಪುತ್ರರಾಗಿರುವ ಇವರು ಬಿಲ್ಲವ ಜಾಗೃತಿ ಬಳಗ ಮುಂಬಯಿ ಅಧ್ಯಕ್ಷರಾಗಿ ಸೇವಾ ನಿರತರಾಗಿದ್ದಾರೆ. ಪತ್ನಿ ಯಶೋಧಾ, ಇಬ್ಬರು ನಿಖಿತಾ ಮತ್ತು ಅಂಕಿತಾ ಸುಪುತ್ರಿಯರ ಸುಂದರ ಸಂಸಾರ. ಮಹೇಶ್ ಲಂಚ್ ಹೋಮ್ ಸಂಸ್ಥೆಯ ಪಾಲುದಾರರಾಗಿ, ಶಿವ ಸಾಗರ್ ಹೊಟೇಲು ಸಮೂಹ ಹಾಗೂ ಗ್ರೀನ್ಲ್ಯಾಂಡ್ ಟೈಲ್ಸ್ ಲಿಮಿಟೆಡ್ ಕಾರ್ಯಾಧ್ಯಕ್ಷ, ಆಡಳಿತ ನಿರ್ದೇಶಕರಾಗಿ ವೃತ್ತಿ ನಿರತ ಯುವೋದ್ಯಮಿ ಇವರಾಗಿದ್ದಾರೆ.
ಸಂದರ್ಶನ: ರೋನ್ಸ್ ಬಂಟ್ವಾಳ್

