ಮುಂಬಯಿ ಕೈಕಂಬ: ಈತ ರಕ್ಷಿತ್.ಬಡ ಕುಟುಂಬದಲ್ಲಿ ಹುಟ್ಟಿರುವ ಈತ ಸ್ವಯಂ-ಸಾಧನೆ ಮೂಲಕ ಪಿಯು ಪರೀಕ್ಷೆಯಲ್ಲಿ ಗಮನೀಯ ಸಾಧನೆಗೈದು ಶಾಲೆ, ಪಾಲಕರು ಮತ್ತು ಊರಿಗೆ ಹೆಮ್ಮೆ ತಂದಿದ್ದಾನೆ. ಮನೆಯ ಕಡು ಬಡತನದಿಂದಾಗಿ ಭವಿಷ್ಯದ ಶಿಕ್ಷಣ ಕಮರಿ ಹೋಗಬಹುದೇನೋ ಎಂಬ ಚಿಂತೆ ಈತಗೆ ಕಾಡಲಾರಂಭಿಸಿದೆ. ಕಾರಣ, ಈತ `ಸಹಾಯ ಮಾಡುವ ಕೈಗಳತ್ತ’ ಎದುರು ನೋಡುವಂತಾಗಿದೆ.
ಗುರುಪುರದ ಚಿಲಿಂಬಿಗುಡ್ಡೆಯಲ್ಲಿ ತಂದೆ ಕೂಸಪ್ಪ ಪೂಜಾರಿ ಮತ್ತು ತಾಯಿ ಮೋಹಿನಿಯೊಂದಿಗೆ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಈತ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು, ಬಳಿಕ ಕೈಕಂಬದ ರೋಸಾ ಮಿಸ್ತಿಕಾ ಶಾಲೆಯಲ್ಲಿ ಪಿಯು ಮಾಡಿದ್ದಾನೆ. ಇತ್ತೀಚೆಗೆ ಪ್ರಕಟಗೊಂಡ ಫಲಿತಾಂಶದಲ್ಲಿ ಈತ ಒಟ್ಟು 600 ಅಂಕಗಳಲ್ಲಿ 519 ಅಂಕಗಳೊಂದಿಗೆ (ಶೇ 86) ಡಿಸ್ಟಿಂಕ್ಶನ್ ಪಡೆದಿದ್ದಾನೆ.
ಅನಾರೋಗ್ಯ ಪೀಡಿತ ತಂದೆ ಕೂಸಪ್ಪ ಗುರುಪುರ ಪೇಟೆಯ ಹೋಟೆಲಿನಲ್ಲಿ ಕ್ಲೀನರಾಗಿದ್ದರೆ ತಾಯಿ ಮೋಹಿನಿ ಬೀಡಿ ಬಿಟ್ಟು, ಎಡಪದವಿನ ಮರದ ಮಿಲ್ಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಪುತ್ರಿ 7ನೇ ತರಗತಿಯಲ್ಲಿ ಓದುತ್ತಿದ್ದು, ಅಣ್ಣನಂತೆ ಕಲಿಯುವುದರಲ್ಲಿ ಮುಂದಿದ್ದಾಳೆ. ರಜಾ ದಿನಗಳಲ್ಲಿ, ತಂದೆಯೊಂದಿಗೆ ಅದೇ ಹೋಟೆಲಿನಲ್ಲಿ ಸಪ್ಲಾಯರಾಗಿ ಕೆಲಸ ಮಾಡುತ್ತ ಒಂದಷ್ಟು ಹಣ ಸಂಪಾದಿಸುತ್ತಿದ್ದ ರಕ್ಷಿತ್, ಕೆಪಿಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಕಲಿಯಬೇಕೆಂದುಕೊಂಡಿದ್ದರೂ, ಶುಲ್ಕ ಹಾಗೂ ನಿತ್ಯದ ಖಚರ್ಿಗಾಗಿ ಚಿಂತಿತನಾಗಿದ್ದಾನೆ.
ಶಾಲಾ ಶುಲ್ಕ ಪಾವತಿಸಲು ವಾಹನ ತೊಳೆಯುವ ಕೆಲಸದೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕೊಂಡಿರುವ ಈತನ ಕಲಿಯುವ ಆಕಾಂಕ್ಷೆ ನಿಜಕ್ಕೂ ಮೆಚ್ಚುವಂತದ್ದು. ಹಿಂದಿನ ಶಿಕ್ಷಣಕ್ಕೆ ಕೆಲವು ಕೊಡುಗೈ ದಾನಿಗಳು ನೆರವಾಗಿರುವುದುಂಟು. “ನನಗೆ ಶಾಲೆಯಲ್ಲಿ ದೊರೆಯುವ ಸ್ಕಾಲರ್ಶಿಪ್ ಸಿಕ್ಕಿಲ್ಲ. ಒಂದೊಮ್ಮೆ ಅದನ್ನು ಪಡೆಯಲು ಪ್ರಯತ್ನಿಸುತ್ತಿದ್ದರೆ, ಅತ್ತ ಕೆಲಸವೂ ಇಲ್ಲ; ಇತ್ತ ಶಿಕ್ಷಣವೂ ಇಲ್ಲದಂತಾಗುತ್ತಿತ್ತು. ಮುಂದೆಯೂ ನಿಮ್ಮ ನೆರವಿನ ಬಲ ನನ್ನ ಶಿಕ್ಷಣಕ್ಕೆ ದಾರಿದೀಪವಾಗಬಹುದು” ಎಂದು ರಕ್ಷಿತ್ ವಿಶ್ವಾಸ ವ್ಯಕ್ತ ಪಡಿಸಿದ್ದಾನೆ. ಸಂಪರ್ಕಿಸಿ: ರಕ್ಷಿತ್ ಎ/ಸಿ ನಂಬ್ರ:01242200073568 (ಐಎಫ್ಎಸ್ಸಿ ನಂಬ್ರ: ಸಿಂಡ್ 0000124) ಅಥವಾ 8546 859851.
