ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ರಕ್ಷಾ ಎಂಬವರು ಸೋಮವಾರ ತರಿಸಿಕೊಂಡ ಇಂಗ್ಲೀಷ್ ವಿಷಯಕ್ಕೆ ಸಂಬಂಧಪಟ್ಟ ಉತ್ತರಪತ್ರಿಕೆಯ ಒಟ್ಟು ಅಂಕ ಕೋಢೀಕರಣದಲ್ಲಿ 20 ಅಂಕ ವ್ಯತ್ಯಾಸ ಉಂಟಾಗಿ ಅಚ್ಚರಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಈ ಶಾಲೆಯಲ್ಲಿ ಒಟ್ಟು 39 ಮಂದಿ ವಿದ್ಯಾರ್ಥಿಗಳ ಪೈಕಿ 38ಮಂದಿ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಶೇ.98 ಫಲಿತಾಂಶ ದಾಖಲಿಸಿದೆ.
ಕಳೆದ ವರ್ಷದಂತೆ ಈ ಬಾರಿಯೂ ಶೇ.100 ಫಲಿತಾಂಶದ ನಿರೀಕ್ಷೆಯಲ್ಲಿದ್ದ ಇಲ್ಲಿನ ಮುಖ್ಯಶಿಕ್ಷಕಿ ಸಬಿತಾ ಲವಿನಾ ಪಿಂಟೊ ಅವರು ಕೆಲವೊಂದು ಪ್ರತಿಭಾನ್ವಿತ ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಛಾಯಾಪ್ರತಿ ತರಿಸಿಕೊಂಡಿದ್ದಾರೆ.6btl-Marks

ಈ ಪೈಕಿ ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ರಕ್ಷಾ ಎಂಬಾಕೆಗೆ ಪ್ರಥಮ ಭಾಷೆ ಇಂಗ್ಲೀಷ್ ವಿಷಯದಲ್ಲಿ ಒಟ್ಟು 81 ಅಂಕ ದೊರೆತಿದ್ದರೂ ಕೇವಲ 61 ಎಂದು ನಮೂದಿಸುವ ಮೂಲಕ 20 ಅಂಕ ಕಣ್ಮರೆಯಾಗಿರುವುದು ಪತ್ತೆಯಾಗಿದೆ. ಇದರಿಂದಾಗಿ ಮತ್ತೆ 17 ಮಂದಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಛಾಯಾಪ್ರತಿಗೆ ಅರ್ಜಿ  ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಉತ್ತರ ಪತ್ರಿಕೆ ಛಾಯಾ ಪ್ರತಿ ತರಿಸಿಕೊಳ್ಳಲು ರೂ 300 ಮೊತ್ತ ಪಾವತಿಸಬೇಕಿದ್ದು, ಮರು ಮೌಲ್ಯಮಾಪನಕ್ಕೆ ಮತ್ತೆ ರೂ 700 ಮೊತ್ತ ಪಾವತಿಸಬೇಕಿದೆ.
ಇದೀಗ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಮೌಲ್ಯ ಮಾಪನ ಮಾಡಿರುವ ಶಿಕ್ಷಕರು ಮಾಡಿದ ತಪ್ಪಿಗೆ ಪ್ರತಿಭಾನ್ವಿತ ಬಡಪಾಯಿ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಈಗಾಗಲೇ ಗರಿಷ್ಟ ಅಂಕ ಗಳಿಕೆಗಾಗಿ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ನೀಡುತ್ತಿರುವ ವಿವಿಧ ಸೌಲಭ್ಯ ಮತ್ತು ಬಹುಮಾನಗಳಿಂದ ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಶಾಲೆ ವಂಚಿತಗೊಂಡಿದೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರು ತಕ್ಷಣವೇ ಸ್ಪಂದಿಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸುವುದಾಗಿ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *