ಕೈಕಂಬ : ಕೈಕಂಬ ನೇಸರ ಕೇಂದ್ರೀಯ ಸಮನ್ಯವ ಸಮಿತಿ, ಸ್ಪಂದನ ಸ್ವಸಹಾಯ ಸಂಘಗಳ ಒಕ್ಕೂಟ, ಹಾಗೂ ದಿಶಾ ಟ್ರಸ್ಟ್ ಕೈಕಂಬ ಇದರ ಆಶ್ರಯದಲ್ಲಿ ಬೀಜ ಮೇಳ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ಪ್ರಗತಿಪರ ಕೃಷಿಕರೋರ್ವರು ಹೃದಯಾಘಾತದಿಂದ ವಿಧಿವಶರಾದ ಘಟನೆ ಬುಧವಾರ ಬೆಳಿಗ್ಗೆ 11 ಗಂಟೆಗೆ ದಿಶಾ ಟ್ರಸ್ಟ್ ಕೈಕಂಬ ಇಲ್ಲಿ ನಡೆದಿದೆ.
ಮಲ್ಲೂರು ಪರಾರಿ ಬರ್ಕೆ ಮನೆ ನಿವಾಸಿ ಡಿ. ತ್ಯಾಂಪಣ್ಣ ಶೆಟ್ಟಿ(83) ವಿಧಿವಶರಾದ ಪ್ರಗತಿಪರ ಕೃಷಿಕ.
ದಿಶಾ ಟ್ರಸ್ಟ್ ಕೈಕಂಬ ಇದರ ವತಿಯಿಂದ ಬೀಜಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ತ್ಯಾಂಪಣ್ಣ ಶೆಟ್ಟಿಯವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಕರೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಬೀಜ ಬಿತ್ತುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ತ್ಯಾಂಪಣ್ಣ ಶೆಟ್ಟಿ ಮಾತಿಗಿಳಿದರು.
ಇಂದು ಜನರು ಕೃಷಿಯನ್ನು ಕಂಡು ಅಸಡ್ಡೆ ತೋರುತ್ತಿದ್ದಾರೆ. ಇಂದಿನವರಲ್ಲಿ ಕೃಷಿಯ ಬಗ್ಗೆ ಉತ್ಸಾಹ ಕಡಿಮೆಯಾಗುತ್ತಿದೆ. ಆದರೆ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡರೆ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಬಹುದು. ನಾನು ಕಳೆದ ಹಲವಾರು ವರ್ಷಗಳಿಂದ ಕೃಷಿಯನ್ನು ಮಾಡಿಕೊಂಡು ಬಂದಿದ್ದೇನೆ. ಇದರಲ್ಲಿ ನಾನಾ ರೀತಿಯ ಹೊಸ ವಿಧಾನಗಳನ್ನು ಅಳವಡಿಸಿ ಸಫಲತೆಯನ್ನು ಕಂಡಿದ್ದೇನೆ. ಇದೇ ರೀತಿಯ ಮಾರ್ಗವನ್ನು ತಾವೂ ಅಳವಡಿಸಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿ ಎಂದು ನೆರೆದಿದ್ದ ಸಭಿಕರಿಗೆ ಕಿವಿಮಾತು ಹೇಳಿದ್ದರು.
ಮುಂದೆ ಹೇಗೋ ಏನೋ?:
ಜೀವನದಲ್ಲಿ ಕೃಷಿಯನ್ನು ಅಳವಡಿಸಿಕೊಂಡು ಬಂದಿದ್ದೇನೆ. ಮುಂದೆ ಹೇಗೋ ಏನೋ ಗೊತ್ತಿಲ್ಲ. ಇನ್ನು ಜಾಸ್ತಿ ಸಮಯ ಬದುಕಲಾರೆ ಎಂದೆನಿಸುತ್ತಿದೆ. ಈಗ ನನಗೆ 83 ವರ್ಷ ಇಂದಿರುತ್ತೇನೋ ಅಥವಾ ಮುಂದಿನ ಎರಡು ವರ್ಷದವರೆಗೆ ಇರುತ್ತೇನೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದರು. ನಂತರ ಮಾತಾಡಿ ನನ್ನ ಶರೀರದಲ್ಲಿ ಏನೋ ಒಂದು ರೀತಿ ಆಗುತ್ತಿದೆ ಎಂದಷ್ಟೇ ಹೇಳಿ ಕುರ್ಚಿಯಲ್ಲಿ ವಿರಮಿಸಿಕೊಂಡರು. ಆದರೆ ಅಷ್ಟರಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಉತ್ಸಾಹಿ ತರುಣ: ತ್ಯಾಂಪಣ್ಣ ಶೆಟ್ಟರಿಗೆ ವಯಸ್ಸು 83 ಆಗಿದ್ದರೂ ಉತ್ಸಾಹದ ಚಿಲುಮೆಯಾಗಿದ್ದರು. ಸದಾ ಕಾಲ ಕೃಷಿಯಲ್ಲಿ ಒಂದಲ್ಲಾ ಒಂದು ರೀತಿಯ ಪ್ರಾಯೋಗಗಳನ್ನು ಮಾಡಿಕೊಂಡು ಅದರಲ್ಲಿ ಯಶಸ್ವಿಯೂ ಆಗಿದ್ದು ಕೃಷಿಯಲ್ಲಿ ಲಾಭ ಕಂಡಿದ್ದರು. ತನ್ನವರೊಂದಿಗೆ ಉತ್ಸಾಹದಿಂದ ಮಾತಾಡುತ್ತಾ ಕಾಲ ಕಳೆಯುತ್ತಿದ್ದರು. ಊರಲ್ಲಿ ಗೌರವ ಸ್ಥಾನ ಇವರಿಗಿತ್ತು.
ಅಕ್ಕನೊಂದಿಗೆ ತಮಾಷೆ ಮಾಡಿದ್ದರು: ಕಾರ್ಯಕ್ರಮಕ್ಕೆ ಬರುವಾಗ ತನ್ನ ಅಕ್ಕ ಪದ್ಮಾವತಿ ಎಸ್ ಆಳ್ವಾ ಇವರೊಂದಿಗೆ ತಮಾಷೆ ಮಾಡಿಕೊಂಡು ಬರುತ್ತಿದ್ದರು. ಇವರ ಪುತ್ರಿಯರು ಅದೇ ದಿನ ಮುಂಬೈಗೆ ತೆರಳುವವರಿದ್ದರು. ಅವರಲ್ಲಿ ಇಂದು ಹೋಗಬೇಡಿ ನಾಳೆ ಹೋಗಿ ಎಂದು ಹೇಳಿ ಕಾರ್ ಹತ್ತಿದ್ದರು. ಕಾರ್ನಲ್ಲಿ ತನ್ನ ಅಕ್ಕ ಪದ್ಮವತಿಯವರನ್ನು ಕಂಡು ನೀನು ಕಾರ್ಯಕ್ರಮಕ್ಕೆ ಬರುವುದಾರೆ ನಾನು ಬರುವುದಿಲ್ಲ ಎಂದು ತಮಾಷೆ ಮಾಡಿದ್ದರು. ನಂತರ ನೀನು ಕಾರಿನಲ್ಲಿ ಮುಂದೆ ಕೂತುಕೋ, ನಾನು ಹಿಂದಿನ ಸೀಟಲ್ಲಿ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದರು. ಕಾರ್ಯಕ್ರಮದ ಉದ್ಘಾಟನೆಯಾಗುವ ಸಮಯದಲ್ಲಿ ನಾನು ಹಿಂದೆ ಕೂರುತ್ತೇನೆ, ನೀನೇ ಕಾರ್ಯಕ್ರಮ ಉದ್ಘಾಟಿಸು ಎಂದು ತಮಾಷೆ ಮಾಡಿ ಬಳಿಕ ತಾನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತು ಆರಂಭಿಸುತ್ತಿದ್ದಂತೆ ಇಹಲೋಕ ತ್ಯಜಿಸಿದ್ದಾರೆ. ಇದನ್ನು ಕಂಡು ಅವರ ಅಕ್ಕ ಪದ್ಮಾವತಿ ಅವರು ದುಃಖಿತರಾಗಿದ್ದಾರೆ.
ಬೀಜಮೇಳ: ದಿಶಾ ಟ್ರಸ್ಟ್ ಕೈಕಂಬ ಇದು ಹಲವಾರು ಕೃಷಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಕೃಷಿಯ ಬಗ್ಗೆ ಪ್ರಾಯೋಗಿಕ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿತೆ ನೀಡುತ್ತಾ ಬರುತ್ತಿದೆ. ಅಲ್ಲದೆ ನಿನ್ನೆ ನಡೆದ ಬೀಜ ಮೇಳಕ್ಕೂ ತ್ಯಾಂಪಣ್ಣ ಶೆಟ್ಟಿಯವರನ್ನು ತನ್ನ ಕೃಷಿ ಅಭಿಯಾನದ ಜಾಗೃತಿ ಅಭಿಯಾನದಲ್ಲಿ ಮಾತಾಡುವಂತೆ ಹೇಳಿಕೊಂಡಿದ್ದರು. ಆದರೆ ಈ ಘಟನೆಯಿಂದ ದಿಶಾ ಟ್ರಸ್ಟ್ ಇದರ ನಿದರ್ೇಶಕರಾದ ಸಿಲವೆಸ್ಟರ್ ಡಿ’ಸೋಜಾ ಮತ್ತು ಇತರ ಸಹದ್ಯೋಗಿಗಳು ದುಃಖಿತರಾಗಿದ್ದಾರೆ.ತ್ಯಾಂಪಣ್ಣ ಶೆಟ್ಟಿಯವರ ಮಗ ನಾಶಿಕ್ ನಲ್ಲಿ ಇಂಜಿನಿಯರ್ ವ್ರತ್ತಯಲ್ಲಿ ಇರುವುದರಿಂದ ಅಪಾರ ಸಂಭಂದಿಕರು ದೂರದಲ್ಲಿರುವುದರಿಂದ ಅವರ ಪಾರ್ಥೀವ ಶರೀರವನ್ನು ಗುರುವಾರ ನೆರವೇರಿಸುವುದು ಎಂದು ಅವರ ಕುಟುಂಬದವರು ಸುದ್ದಿ9 ಗೆ ತಿಳಿಸಿದರು.











