ನವದೆಹಲಿ: ರಾಜ್ಯಸಭಾ ಸದಸ್ಯೆಯಾಗಿರುವ ಸ್ಮೃತಿ ಇರಾನಿಗೆ ಮಾನವ ಸಂಪನ್ಮೂಲ ಖಾತೆ ನೀಡಿದ್ದು ಯಾಕೆ, ಕೇವಲ ಎಸ್ ಎಸ್ ಎಲ್ ಸಿ ಓದಿರುವ ಇವರಿಗೆ ಸಚಿವ ಸ್ಥಾನ ನೀಡಿದ್ದು ಯಾಕೆ ಎಂಬ ಕಾಂಗ್ರೆಸ್ ಪ್ರಶ್ನೆಗೆ ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ. ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷೆಯಾಗಿ ಅಷ್ಟು ದೊಡ್ಡ ಪದವಿಯಲ್ಲಿರುವ ಸೋನಿಯಾ ಗಾಂಧಿಯವರ ಶೈಕ್ಷಣಿಕ ಅರ್ಹತೆ ಎಷ್ಟು ಎಂದು ಬಿಜೆಪಿ ಪ್ರಶ್ನಿಸಿದೆ.
ಸಮೃತಿ ಇರಾನಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಕಾಂಗ್ರೆಸ್ ಮುಖಂಡ ಅಜಯ್ ಮಾಕೆನ್ ಎಂಬವರು ಪ್ರಶ್ನಿಸಿ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದರು.
ಜಲಸಂಪನ್ಮೂಲ ಸಚಿವೆಯಾಗಿರುವ ಉಮಾಭಾರತಿಯವರು ಯುಪಿಎ ಮುಖ್ಯಸ್ಥೆ ಓದಿದೆಷ್ಟು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಜವಳಿ ಖಾತೆ ಸಚಿವ ಸಂತೋಷ್ ಗಂಗ್ವಾರ್ ಕೂಡ ಇದೇ ಪ್ರಶ್ನೆ ಎತ್ತಿದ್ದಾರೆ. ಸ್ಮೃತಿ ಇರಾನಿಯ ನಾಯಕತ್ವ ಗುಣಗಳ ಬಗ್ಗೆ ಇಡೀ ದೇಶಕ್ಕೆ ಗೊತ್ತು. ಆದರೆ, ಕಾಂಗ್ರೆಸ್ ಪಕ್ಷ ಆಕೆಯ ಶೈಕ್ಷಣಿಕ ಹಿನ್ನೆಲೆಯನ್ನ ಪ್ರಶ್ನಿಸುತ್ತಿರುವುದು ದುರದೃಷ್ಟವೇ ಸರಿ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೂಡಾ ವಿಷಾದ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಮಣೀಶ್ ತಿವಾರಿ ವಿಷಯಾಧಾರಿತವಾಗಿ ಚರ್ಚೆ ನಡೆಸುವುದು ಕಾಂಗ್ರೆಸ್ ಜಾಯಮಾನವಲ್ಲ, ಅದು ಮಾಕೆನ್ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

