ಬಂಟ್ವಾಳ; ಅಭಿವೃದ್ದಿ ಹಾಗೂ ಚುರುಕು ತನದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದ್ದು, ನರೇಂದ್ರ ಮೋದಿಯವರ ಗುಜರಾತ್ ಐದನೇ ಸ್ಥಾನದಲ್ಲಿದೆ, ಕರ್ನಾಟಕದ ಕಾಂಗ್ರೇಸ್ ಸರ್ಕಾರದ ಬಗ್ಗೆ ಟೀಕಿಸುವವರೆಲ್ಲಾ ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬುಧವಾರ ಬಂಟ್ವಾಳ ಬ್ಲಾಕ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಫರ್ಧಿಸಿದ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನಾ ಸಭೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಪ್ರತೀ ಕ್ಷೇತ್ರದಲ್ಲೂ ಗಣನೀಯ ಅಭಿವೃದ್ದಿ ಕಾರ್ಯಗಳಾಗುತ್ತಿದ್ದು, ಈ ಬಾರಿಯ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೇಸ್ ಬಿಜೆಪಿಗಿಂತಲೂ ಅಧಿಕ ಮತಗಳಿಸಿರುವುದು ಕಾಂಗ್ರೇಸ್ ಜನತೆಯ ಪ್ರೀತಿ ವಿಶ್ವಾಸಕ್ಕೆ ಗಳಿಸಿದೆ ಎನ್ನುವುದಕ್ಕೆ ಸಾಕ್ಷಿ ಎಂದರು. ಜಿಲ್ಲೆಯಲ್ಲಿ ವಿವಿಧ ಅಭಿವೃದ್ದಿ ನಿಗಮಗಳ ಮೂಲಕ ಸುಮಾರು 40 ಕೋಟಿ ರೂ ಸಾಲಮನ್ನಾ ಮಾಡಿರುವುದು ರಾಜ್ಯ ಸರ್ಕಾರದ ಹೆಗ್ಗಳಿಕೆ ಎಂದ ಅವರು, ಬಿಜೆಪಿಗರು ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿದ್ದು, ಜನತೆಯ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಆದರೆ ಜನತೆ ಕಾಂಗ್ರೇಸ್ ನ ಜನಪರ ಕಾರ್ಯಗಳಿಗೆ ಬೆಂಬಲ ನೀಡುತ್ತಾರೆ ಎಂದರು.
ಎತ್ತಿನ ಹೊಳೆ ಯೋಜನೆಯನ್ನು ಬಿಜೆಪಿ ಸರ್ಕಾರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಮಂಜೂರು ಮಾಡಿ, ಆಗಿನ ಗೃಹ ಸಚಿವರಾಗಿದ್ದ ವಿ.ಎಸ್.ಆಚಾರ್ಯ ಘೋಷಣೆ ಮಾಡಿದಾಗ, ನಳಿನ್ ಕುಮಾರ್ ಎಲ್ಲಿದ್ದರು, ಪ್ರತಾಪ ಸಿಂಹ ನಾಯಕ್ ಎಲ್ಲಿದ್ದರು ಎಂದು ಪ್ರಶ್ನೆ ಮಾಡಿದರು. ಬಿಜೆಪಿ ಚುನಾವಣೆಗೆಂದೇ ಹುಟ್ಟಿದ ಪಕ್ಷ ಎಂದು ಗಂಭೀರ ಆರೋಪ ಹೊರಿಸಿದ ಅವರು, ಕಸ್ತೂರಿ ರಂಗನ್ ವಿಚಾರದಲ್ಲೂ ಬಿಜೆಪಿಗರು ಈಗ ಬಾಲ ಮುದುರಿಸಿ ಕುಳಿತುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲು, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಬಿ.ಹೆಚ್.ಖಾದರ್, ಬೂಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಜಿಲ್ಲಾಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಶಾಹುಲ್ ಹಮೀದ್, ಮಮತಾ ಗಟ್ಟಿ, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ಪದ್ಮಶೇಖರ ಜೈನ್, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಮಾಜಿ ಅಧ್ಯಕ್ಷ ವಸಂತಿ ಚಂದಪ್ಪ, ಪಕ್ಷದ ಪ್ರಮುಖರಾದ ಸುದರ್ಶನ್ ಜೈನ್, ಪದ್ಮನಾಭ ರೈ, ರಾಜಶೇಖರ್ ನಾಕ್, ಜನಾರ್ಧನ ಚೆಂಡ್ತಿಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ಚಂದ್ರಹಾಸ ಕರ್ಕೇರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಮೇಶ್ವರ ಎಂ.ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
