ವಿಟ್ಲ: ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿ ವಾರವಾದರೂ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ ಗೃಹ ಬಂಧನದಲ್ಲಿಟ್ಟ ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೇಳರದ ಪೈವಳಿಕೆ ಮೂಲದ ಪ್ರಸ್ತುತ ಕನ್ಯಾನ ಗ್ರಾಮದ ಕಣಿಯೂರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಫಾರೂಕ್ (32) ಪೊಲೀಸ್ ವಶದಲ್ಲಿರುವ ವ್ಯಕ್ತಿಯಾಗಿದ್ದಾರೆ. ವಾರದ ಹಿಂದೆ ಕುಡ್ಪಲ್ತಡ್ಕ ಪ್ರದೇಶದಲ್ಲಿ ತಡ ರಾತ್ರಿ ಬೈಕೊಂದನ್ನು ಹಿಡಿದುಕೊಂಡು ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಬೈಕ್ ಬಳಿ ಬರುತ್ತಿದ್ದಂತೆ ಬೈಕ್ ಬಿಟ್ಟು ಪರಾರಿಯಾಗಿದ್ದ. ತಲವಾರು ಸೇರಿ ಕೆಲವು ಹತ್ಯಾರುಗಳನ್ನು ಗಮನಿಸಿದ ಸಾರ್ವಜನಿಕರು ಆತನನ್ನುಹಿಡಿಯಲೇ ಬೇಕೆಂಬ ಛಲದಲ್ಲಿದ್ದ ಬೈಕ್ ಚಕ್ರ ಪಂಚರ್ ಮಾಡಿ ಹೊಂಚು ಹಾಕಿ ಕುಳಿತಿದ್ದರು. ಬೆಳಗ್ಗಿನ ಜಾವ ಬೈಕ್ ಕೊಂಡೊಯ್ಯಲು ಬಂದ ಫಾರೂಕ್ನನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು.

ಕನ್ಯಾನದ ಶೆಟ್ಟಿಬೆಟ್ಟು ಬೆಂಬಲ್ಲಿಂದ ವಿವಾಹವಾದ ಈತ ಕನ್ಯಾನ ಸುತ್ತಮುತ್ತಲಿನ ಕೆಲ ಯುವಕರ ಜತೆ ಸೇರಿಕೊಂಡು ಕಳ್ಳತನ ದರೋಡೆ ಮೊದಲಾದ ಕೃತ್ಯಗಳನ್ನು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನಡೆಸಿದ್ದ ಎನ್ನಲಾಗಿದೆ. ವಿಟ್ಲ ಆಸುಪಾಸಿನಲ್ಲಿ ಹಣ ದರೋಡೆಯಂತ ಪ್ರಕರಣಗಳನ್ನು ನಡೆಸುತ್ತಾ ಬಂದಿದ್ದರೂ ಪೊಲೀಸರಿಗೆ ಈತನ್ನು ಬಂಧಿಸಲಾಗಿರಲಿಲ್ಲ. ಸಾರ್ವಜನಿಕರು ಹಿಡಿದು ನೀಡಿದರೂ ಯಾವುದೇ ಪ್ರಕರಣವನ್ನು ದಾಖಲಿಸಿಕೊಳ್ಳದೆ, ನ್ಯಾಯಾಲಯಕ್ಕೆ ಹಾಜರೂ ಪಡಿಸಿದೆ ಆತನ ಪರವಾಗಿ ಪೊಲೀಸರು ಕೆಲಸ ನಡೆಸುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇನ್ನೂ ಇಬ್ಬರು ವಶಕ್ಕೆ?
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ ಫಾರೂಕ್ ಜತೆ ಸಹಕರಿಸಿಕೊಂಡಿದ್ದ ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ. ದರೋಡೆ ವಸ್ತುಗಳು ಸಿಕ್ಕಿದ ಬಳಿಕ ಅವರನ್ನು ನ್ಯಾಯಾಲಕ್ಕೆ ಹಾಜರು ಪಡಿಸುವ ಕಾರ್ಯ ನಡೆಯುತ್ತದೆ ಎನ್ನಲಾಗಿದೆ. ಇದರ ಮೊದಲು ಪ್ರಭಾವಿಗಳಿಂದ ಕರೆ ಬಂದಲ್ಲಿ ಬಿಟ್ಟು ಕಳುಹಿಸಲು ವ್ಯವಸ್ಥೆಯೂ ನಡೆಯಬಹುದಾಗಿದೆ.

ಸಾಲೆತ್ತೂರು ಪಕರಣದ ಆರೋಪಿಯೇ?
ಸಾಲೆತ್ತೂರು ಜಂಕ್ಷನ್ ಬಾರ್ ಒಂದರಲ್ಲಿ ಕೆಲವು ತಿಂಗಳ ಹಿಂದೆ ಕಳ್ಳತನ ನಡೆದಿದ್ದು, ಆ ಪ್ರಕರಣದಲ್ಲಿ ಈತನ ಕೈವಾಡವಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾರ್ ನಲ್ಲಿದ್ದ ಸಿಸಿಟಿವಿ ಕ್ಯಾಮರಾದ ಮಾಹಿತಿ ಆಧರಿಸಿ ಸರಿಯಾದ ತನಿಖೆ ನಡೆಯಬೇಕಾಗಿದೆ.

ಅಡ್ಡಾಡುವ ರೌಡಿಗಳ ಮೇಲೆ ಕ್ರಮವಿಲ್ಲ!
ಕನ್ಯಾನ ಪರಿಸರದಲ್ಲಿ ಮತ್ತೆ ಕೇರಳದ ರೌಡಿ ಪ್ರವೇಶ ಮಾಡಲು ಆರಂಭಿಸಿದ್ದು, ಇದು ಸಾರ್ವಜನಿಕರನ್ನು ಆತಂಕಪಡುವಂತೆ ಮಾಡಿದೆ. ಮೂರು ತಿಂಗಳ ಹಿಂದೆ ಕನ್ಯಾನ ಪೇಟೆಯಲ್ಲಿ ಹಾಡಹಗಲೇ ಆಸೀಫ್ ಎಂಬ ಯುವಕನನ್ನು ಕೇರಳದ ತಂಡ ಕೊಚ್ಚಿ ಕೊಲೆ ನಡೆಸಿತ್ತು.
ಅದಾದ ಬಳಿಕ ಈ ಭಾಗದಲ್ಲಿ ಸಾರ್ವಜನಿಕರು ಸಂಜೆ 6 ಗಂಟೆ ನಂತರ ಪೇಟೆ ಕಡೆಗೆ ಬರುತ್ತಿರಲಿಲ್ಲ. ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿ ಮನೆಯಲ್ಲಿಯೇ ಕುಳಿತ್ತಿದ್ದರು. ಪೊಲೀಸರು ನಾಕಾಬಂಧಿ ಹಾಕಿದ್ದರಿಂದ ಕೇರಳದ ರೌಡಿಗಳು ಈ ಕಡೆ ಬರುತ್ತಿರಲಿಲ್ಲ. ಇದರಿಂದ ಈ ಭಾಗದವರು ನೆಮ್ಮಂದಿಯಿಂದ ಜೀವನ ನಡೆಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಕೇರಳದ ಕುಖ್ಯಾತ ಗ್ಯಾಂಗ್ ತಂಡಗಳು ಇಲ್ಲಿ ತಮ್ಮ ಅಟ್ಟಾಹಾಸ ಮೆರೆಯುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಮತ್ತೊಂದು ರಕ್ತಪಾತ ಹರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಾರ್ವಜನಿಕರು ಪತ್ರಿಕೆಗೆ ಮಾಹಿತಿ ನೀಡಿಒದ್ದಾರೆ.
ಇದೀಗ ಮತ್ತೆ ಮತ್ತೆ ಕಳ್ಳ ಖದೀಮರು ಈ ಭಾಗದಲ್ಲಿ ಬರಲಾರಂಭಿಸಿದ್ದರಿಂದ ಜನತೆ ಭಯದ ವಾತಾವರಣದಲ್ಲಿ ದಿನದೂಡುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *