ಹೊಸದಿಲ್ಲಿ: ಅರವಿಂದ ಕೇಜ್ರಿವಾಲ್ ಅವರ ನಡೆಯಿಂದ ಆಕ್ರೋಶಗೊಂಡಿರುವ ಇಬ್ಬರು ಮುಖಂಡರು ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಆಪ್ನ ಸಂಸ್ಥಾಪಕ ಸದಸ್ಯರಲ್ಲೋರ್ವರಾಗಿದ್ದ ಶಾಜಿಯಾ ಇಲ್ಮಿ ಅರವಿಂದ ಕೇಜ್ರಿವಾಲ್ ಅವರ ನಡೆಯಿಂದ ತೀವ್ರ ಆಕ್ರೋಶಗೊಂಡಿದ್ದಾರೆ. ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ೨೦೧೪ರ ಜನವರಿಯಲ್ಲಿ ಆಪ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಕ್ಯಾ.ಗೋಪಿನಾಥ್ ಅವರು ಇದೀಗ ರಾಜೀನಾಮೆ ನೀಡಿದ್ದಾರೆ. ಪಕ್ಷದ ಸೋಲು ಹಾಗೂ ಕೇಜ್ರಿವಾಲ್ ನಡೆಯಿಂದ ನೊಂದು ಹೊರಬರುವುದಾಗಿ ಅವರು ಹೇಳಿದ್ದಾರೆ.
ಗಡ್ಕರಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಅರವಿಂದ ಕೇಜ್ರಿವಾಲ್ ಅವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ. ೧೦ ಸಾವಿರ ವೈಯಕ್ತಿಕ ಬಾಂಡ್ ನೀಡಲು ನಿರಾಕರಣೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧನಕ್ಕೆ ಒಪ್ಪಿಸಲಾಗಿದೆ. ಕೇಜ್ರಿವಾಲ್ ಬಾಂಡ್ ನೀಡಿ ಜಾಮೀನು ಪಡೆದುಕೊಳ್ಳಬೇಕಾಗಿತ್ತು ಎಂದು ಹೇಳಿರುವ ಶಾಜಿಯಾ ಇಲ್ಮಿ, ಎಲ್ಲದಕ್ಕೂ ಹೋರಾಟವೊಂದು ಪರಿಹಾರವಾಗದು. ಈ ಬಗ್ಗೆ ಕೇಜ್ರಿವಾಲ್ ಆತ್ಮಾವಲೋಕನ ಮಾಡಲಿ. ಅಣ್ಣಾ ಹಜಾರೆ ಅವರೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರು ಎಂದು ಹೇಳಿರುವ ಇಲ್ಮಿ, ನಾನು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

