ಬಂಟ್ವಾಳ: ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶನಿವಾರ ರಾತ್ರಿ ವಾರ್ಷಿಕ ಬ್ರಹ್ಮಬೈದರ್ಕಳ ಜಾತ್ರಾ ಮಹೋತ್ಸವ ಸಮಾಪನಗೊಂಡಿತು. 
ಆರಂಭದಲ್ಲಿ ಬ್ರಹ್ಮಬೈದರ್ಕಳರು ಒಲಿ ಮರೆಯಿಂದ ಹೊರಟು ಬಳಿಕ ವಿಶೇಷ ದರ್ಶನ ಸೇವೆ ನೀಡಿದ ಬಳಿಕ ಇಲ್ಲಿನ ವಿಶಾಲವಾದ ಬಾಕಿಮಾರು ಗದ್ದೆಗೆ ಇಳಿಯುವ ದೃಶ್ಯ ಆಕರ್ಷಕವಾಗಿತ್ತು. ಈ ಸಂದರ್ಭದಲ್ಲಿ ನೂರಾರು ಮಂದಿ ಭಕ್ತರು ಸಾಲಾಗಿ ಬಂದು ದೈವಗಳಿಗೆ ಹೂಹಾರ ಸಮರ್ಪಿಸಿದರು. ಈ ಬಾಕಿಮಾರು ಇಳಿಯುವ ದೃಶ್ಯ ವೀಕ್ಷಿಸಲು ಜಿಲ್ಲೆಯ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಪ್ರತೀ ವರ್ಷ ಬರುವುದು ಇಲ್ಲಿನ ವಿಶೇಷತೆಯಾಗಿದೆ. ಬಾಕಿಮಾರು ಗದ್ದೆಯಲ್ಲಿ ಬ್ರಹ್ಮ ಬೈದರ್ಕಳರ ಕಡಸಾಲೆ ಸೇವೆ, ಕೋಟಿ-ಚೆನ್ನಯರ ಸುರ್ಯ ಸೇವೆ ಬಳಿಕ ಗರಡಿಯಲ್ಲಿ ಮುಂಜಾನೆ ಮಾಯಂದಾತಿ ದೇವಿ ಉತ್ಸವ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಹೈಕೋರ್ಟ್ ನ್ಯಾಯಾಧೀಶ ಶ್ರೀನಿವಾಸ ಬಿಜೂರು ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
