ಬಂಟ್ವಾಳ: ಪ್ರತಿನತ್ಯ ಟ್ರಾಫಿಕ್ ಕಿರಿಕಿರಿಯಿಂದ ವಾಹನ ಸಂಚಾರಕ್ಕೆ ಇಕ್ಕಟ್ಟಾಗಿದ್ದ ಮೆಲ್ಕಾರ್ ಜಂಕ್ಷನ್ ಇನ್ನು ಮುಂದೆ ಟ್ರಾಫಿಕ್ ಮುಕ್ತವಾಗಲಿದೆ. ಟ್ರಾಫಿಕ್ ಠಾಣಾ ಎಸೈ ಚಂದ್ರಶೇಖರಯ್ಯ ಅವರ ಮುಂದಾಳ್ವತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮನವೊಲಿಸಿ ವಿಸ್ತರಿಸುವ ಕಾಮಗಾರಿ ಕೈಗೊಂಡಿದ್ದಾರೆ. ರಸ್ತೆಯ ಬದಿಯಲ್ಲಿದ್ದ ಅಕ್ರಮ ಗೂಡಂಗಡಿಗಳನ್ನು ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೆರವುಗೊಳಿಸುವ ಕೆಲಸವನ್ನು ಮಾಡಿದರು.


ಅ ಬಳಿಕ ರಸ್ತೆಯ ಎಲ್ಲಾ ಸುತ್ತಲೂ ಮಣ್ಣು ಹಾಕುವ ಮೂಲಕ ರಸ್ತೆಯ ಅಗಲೀಕರಣ ಕೆಲಸ ಆರಂಭವಾಗಿದೆ. ರಸ್ತೆ ಅಗಲೀಕರಣ ಆಗಿದೆ ಆದರೆ ಇನ್ನು ಮುಂದೆ ರಸ್ತೆ ಅಗಲಗೊಳಸಲು ಹಾಕಿದ ಮಣ್ಣು ದೂಳಿನಿಂದ ಅಂಗಡಿಗಳಿಗೆ ಸಾಕಷ್ಟು ತೊಂದರೆ ಆಗಬಹುದು ಎನ್ನುವ ಮಾತುಗಳು ಕೂಡಾ ಕೇಳಿ ಬರುತ್ತಿದೆ.
ಟ್ರಾಫಿಕ್ ಠಾಣಾ ಎಸೈ ಚಂದ್ರಶೇಖರಯ್ಯನವರು ವಾಹನಗಳ ಸಂಚಾರಕ್ಕೆ ಮೆಲ್ಕಾರ್ನಲ್ಲಿ ಉಂಟಾಗುವ ಅಡೆತಡೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಈ ಹಿಂದೆಯೇ ಮನವರಿಕೆ ಮಾಡಿದ್ದರು.
ಆದರೂ ಇಲಾಖೆ ಯಾವ ಕೆಲಸವನ್ನು ಮಾಡದೆ ಸಾರ್ವಜನಿಕರು ತೊಂದರೆ ಅನಭವಿಸುತ್ತಿದ್ದರು. ಮೆಲ್ಕಾರ್ ಮುಖ್ಯ ಪೇಟೆಯ ರಸ್ತೆ ಇಕ್ಕೆಲಗಳನ್ನು ಜೆಸಿಬಿ ಮೂಲಕ ವಿಸ್ತರಿಸಿ, ತಗ್ಗು ಮತ್ತು ಎತ್ತರದ ಸ್ಥಳಗಳನ್ನು ಸಮತಟ್ಟುಗೊಳಿಸಿ, ಕಂದಕಕ್ಕೆ ಮಣ್ಣು ತುಂಬಿ ರಸ್ತೆ ಅಗಲಗೊಳಿಸಿ ಎಲ್ಲಾ ದಿಕ್ಕುಗಳಿಗೂ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪುರಸಭೆ ಮಾಡಬೇಕಾದ ಕಾರ್ಯವನ್ನು ಸಂಚಾರಿ ಠಾಣಾ ಎಸೈ ಮಾಡಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಬಿಸಿರೋಡಿನ ಮುಖ್ಯವೃತ್ತದಲ್ಲಿ ಹೊಂಡಗಳು ನಿರ್ಮಾಣಗೊಂಡಿದ್ದಾಗ ಎಸೈ ಚಂದ್ರಶೇಖರಯ್ಯನವರೇ ಮಣ್ಣು ಹಾಕಿ ಹೊಂಡ ಮುಚ್ಚಿಸುವ ಕಾರ್ಯ ಮಾಡಿದ್ದರು. ಅಲ್ಲದೆ ರಸ್ತೆಯನ್ನು ಅಗಲಗೊಳಿಸಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
