ಮುಂಬಯಿ: ಕೃಷ್ಣರಾಜಪೇಟೆ:, ನ.01: ಕನ್ನಡದ ನೆಲ-ಜಲ ಹಾಗೂ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಎದುರಾದ ಸಂದರ್ಭದಲ್ಲಿ ಕನ್ನಡಿಗರಾದ ನಾವು ಬೀದಿಗಿಳಿದು ಹೋರಾಡಲು ಸದಾ ಸಿದ್ಧರಿರಬೇಕು. ನಮ್ಮ ರಕ್ತದ ಕಣ, ಕಣದಲ್ಲಿಯೂ ಕನ್ನಡಾಭಿಮಾನವನ್ನು ಬೆಳೆಸಿಕೊಂಡು, ಕನ್ನಡ ಭಾಷೆ ಗೊತ್ತಿಲ್ಲದ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡಲು ಮುಂದಾಗಬೇಕು ಎಂದು ಕೆ.ಆರ್ ಪೇಟೆ ಶಾಸಕ ನಾರಾಯಣ ಆರ್.ಗೌಡ ಕರೆ ನೀಡಿದರು. ಇಂದಿಲ್ಲಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.


ವಿಶ್ವದ ಜೀವಂತ ಭಾಷೆಗಳಲ್ಲಿ ಒಂದಾಗಿರುವ, ಅತೀ ಹೆಚ್ಚು ಜನರು ಮಾತನಾಡಲು ಬಳಸುತ್ತಿರುವ ಕನ್ನಡ ಭಾಷೆಯು ವಿಶ್ವದ ಶ್ರೀಮಂತ ಭಾಷೆಗಳಲ್ಲಿ ಅಗ್ರ ಸ್ಥಾನದಲ್ಲಿದೆ. 2 ಸಾವಿರ ವರ್ಷಗಳೀಗೂ ಹೆಚ್ಚಿನ ಭವ್ಯವಾದ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯು ದೇಶದಲ್ಲಿಯೇ ಇತರೆ ಭಾಷೆಗಳಿಗಿಂತಲೂ ಅತೀ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಸಮೃದ್ಧವಾಗಿದೆ. ಕನ್ನಡಿಗರಲ್ಲಿನ ನಿರಭಿಮಾನ ಹಾಗೂ ಆಂಗ್ಲಭಾಷೆ ಸೇರಿದಂತೆ ಇತರೆ ಭಾಷೆಗಳ ದಬ್ಬಾಳಿಕೆ ಹಾಗೂ ಕನ್ನಡಿಗರಲ್ಲಿನ ವ್ಯಾಮೋಹದಿಂದಾಗಿ ಕನ್ನಡ ಭಾಷೆಗೆ ಕನ್ನಡ ನಾಡಿನಲ್ಲಿಯೇ ವಿಫತ್ತು ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕರು ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕನ್ನಡಿಗರಾದ ನಾವು ನಿರಭಿಮಾನಿಗಳಾಗಿ ಅಭಿಮಾನ ಶೂನ್ಯರಾಗದೇ ನೆಲ-ಜಲದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಕನ್ನಡದಲ್ಲಿಯೇ ಶಿಕ್ಷಣ ಕೊಡಿಸುವ ಬದ್ಧತೆಯನ್ನು ಪ್ರದರ್ಶನ ಮಾಡಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ರಾಷ್ಟ್ರಧ್ವಜಾರೋಣ ನೆರವೇರಿಸಿದ ತಾಲೂಕು ದಂಢಾಧಿಕಾರಿ, ತಹಶೀಲ್ದಾರ್ ಕೆ.ರತ್ನಾ ಕನ್ನಡವು ಅತ್ಯಂತ ಶ್ರೀಮಂತವಾದ ಭಾಷೆಯಾಗಿದ್ದು ಕಲಿಯಲು ಮತ್ತು ಮಾತನಾಡಲು ಅತ್ಯಂತ ಸುಲಭವಾದ ಭಾಷೆಚಿಾಗಿದೆ. ಕನ್ನಡುಗರಾದ ನಾವು ನವೆಂಬರ್ ಕನ್ನಡಿಗರಾಗದೇ ವರ್ಷವಿಡೀ ಕನ್ನಡಾಭಿಮಾನವನ್ನು ಬೆಳೆಸಿಕೊಂಡು ನಿಜವಾದ ಕನ್ನಡಿಗರಾಗಿ ಕನ್ನಡಾಂಭೆಯ ಕೀರ್ತಿ ಯನ್ನು ಬೆಳಗಲು ಪಣತೊಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ಮಂಜೇಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿ ಮೋಹನ್, ತಾಲೂಕು ಕರವೇ ಅಧ್ಯಕ್ಷ ಎ.ಸಿ.ಕಾಂತರಾಜು ಸಮಾರಂಭದಲ್ಲಿ ಉಪಸ್ಥಿತರಿದ್ದು, 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಪುರಸಭೆ ಅಧ್ಯಕ್ಷ ಕೆ.ಗೌಸ್ಖಾನ್, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವೇಗೌಡ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ರಾಮಚಂದ್ರ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಚಿಕ್ಕಾಡೆ ಅರವಿಂದ್, ಜಿ.ಪಂ ಮಾಜಿಸದಸ್ಯ ಡಾ.ಎಸ್.ಕೃಷ್ಣಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್ ಡಿ.ಯೋಗೇಶ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಕಾಳೇಗೌಡ, ಜಿ.ಪಂ ಎಂಜಿನಿಯರಿಂಗ್ ಉಪವಿಭಾಗದ ಎಇಇ ಬಸವರಾಜು, ಮುಖ್ಯಾಧಿಕಾರಿ ಸಿ.ಎಸ್.ಬಸವರಾಜು, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ರಾಜ್ಯ ಮಟ್ಟದ ವೀರಭದ್ರ ನೃತ್ಯಪಟು ಕುಂದೂರು ಜಗಧೀಶ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ ಸ್ವಾಗತಿಸಿದರು, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ ವಂದಿಸಿದರು, ಶಿಕ್ಷಣ ಸಂಯೋಜಕರಾದ ಹೆಚ್.ಎನ್.ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮಕ್ಕಳು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನೃತ್ಯ ಪ್ರದರ್ಶನಗಳು ಸಾರ್ವಜನಿರನ್ನು ರಂಜಿಸಿದವು. ಇದೇ ಮೊದಲ ಭಾರಿಗೆ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ಚಿತ್ರ ವರದಿ : ರೊನಿಡಾ ಮುಂಬಯಿ


