ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಯಮರಾಯನಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಅವರಿಬ್ಬರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್’ಗೆ ರಣಹದ್ದೊಂದು ಡಿಕ್ಕಿ ಹೊಡೆದಿತ್ತು. ಆದರೆ, ಪೈಲಟ್ ಜಾಗ್ರತೆ ವಹಿಸಿ ಸಮೀಪದ ಲಕ್ನೋ ವಿಮಾನನಿಲ್ದಾಣದಲ್ಲಿ ಹೆಲಿಕಾಪ್ಟರನ್ನ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ಮೂಲಕ, ಸಿಎಂ ಪ್ರಾಣ ಉಳಿಸಿಕೊಂಡಿದ್ದಾರೆ.

ಸೈಫಾಯ್ ಬಳಿ ತನ್ನ ಸಂಬಂಧಿ ರತನ್ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆ ಮುಗಿಸಿಕೊಂಡು ಹೆಲಿಕಾಪ್ಟರ್’ನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್’ನಲ್ಲಿ ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್ ಅವರೊಂದಿಗೆ ಪಿಡಬ್ಲ್ಯೂಡಿ ಸಚಿವ ಶಿವಪಾಲ್ ಯಾದವ್ ಕೂಡ ಪ್ರಯಾಣಿಸುತ್ತಿದ್ದರು. ಲಕ್ನೋ ಏರ್’ಪೋರ್ಟ್’ನಿಂದ 12 ಕಿಮೀ ದೂರದಲ್ಲಿ 3 ಸಾವಿರ ಅಡಿ ಎತ್ತರದಲ್ಲಿ ಹೆಲಿಕಾಪ್ಟರ್ ಸಾಗುತ್ತಿತ್ತು..
ಹೆಲಿಕಾಪ್ಟರ್’ಗೆ ಹಕ್ಕಿ ಡಿಕ್ಕಿ ಹೊಡೆದ ಮಾಹಿತಿ ಸಿಕ್ಕ ಕೂಡಲೇ ಲಕ್ನೋ ವಿಮಾನನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಆಂಬುಲೆನ್ಸುಗಳು, ಅಗ್ನಿಶಾಮಕ ವಾಹನಗಳನ್ನ ನಿಯೋಜಿಸಲಾಗಿತ್ತು. ಸುದೈವವಶಾತ್, ಹೆಲಿಕಾಪ್ಟರ್ ಸುರಕ್ಷಿತವಾಗಿ ಕೆಳಗಿಳಿದಿದೆ.
