ಉಳ್ಳಾಲ: ಗಣೇಶ ಹಬ್ಬದ ತಯಾರಿ ತೊಕ್ಕೊಟ್ಟು ಜನರಿಗೆ ಬಿಸಿ ಮುಟ್ಟಿಸಿದೆ. ಒಂದೆಡೆ ಜೀವನೋಪಾಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೆ, ಇತ್ತ ಹಬ್ಬದ ಸದುಪಯೋಗವನ್ನು ಪಡೆದುಕೊಂಡಿರುವ ಘಟ್ಟದ ಮೇಲಿನ ವ್ಯಾಪಾರಸ್ಥರು ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಬೀಡು ಬಿಟ್ಟು ಹಬ್ಬದ ತಯಾರಿ ಸಾಮಗ್ರಿಗಳನ್ನು ದುಬಾರಿ ಬೆಲೆಯಲ್ಲಿ ಮಾರಾಟ ಮಾಡುವುದು ಕಂಡು ಬಂತು.


ಸೇವಂತಿ ಹೂವಿಗೆ ಮಾರಿಗೆ ರೂ. 80, ಕಬ್ಬೊಂದರ ಕಟ್ಟಿಗೆ ರೂ. 250. ಹೀಗೆ ಹೊರಜಿಲ್ಲೆಯ ವ್ಯಾಪಾರಸ್ಥರು ಚರ್ಚೆಗೂ ಮನ್ನಣೆ ನೀಡದೆ ಮಾರಾಟ ಮಾಡಿದರು. ಗೌರಿ ಗಣೇಶ ಹಬ್ಬದ ಮುನ್ನ ದಿನವಾದ ಮಂಗಳವಾರದಂದೇ ರಾಷ್ಟ್ರೀಯ ಹೆದ್ದಾರಿ ಬದಿಯ ಸ್ಥಳದಲ್ಲಿ ವ್ಯಾಪಾರಸ್ಥರು ತಮ್ಮೂರಿನಿಂದ ತಂದ ಹೂವನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ಮಂಗಳೂರಿನಲ್ಲಿ ರೂ. 40, 50 ರಂತೆ ಸೇವಂತಿ ಹೂವಿನ ಮಾರೊಂದರ ಮಾರಾಟವಾಗುತ್ತಿದ್ದರೆ, ಅದೇ ಹೂವಿಗೆ ತೊಕ್ಕೊಟ್ಟು ಬಳಿ ರೂ. 80 ಆದರೆ, ಒಳಪ್ರದೇಶಗಳಲ್ಲಿ 100 ದಾಟಿತ್ತು. ಕಬ್ಬಿನ ಕಟ್ಟಕ್ಕೂ ರೂ. 250ರಲ್ಲಿ ಮಾರಾಟ ಮಾಡುವುದನ್ನು ಹಬ್ಬವನ್ನು ಆಚರಿಸಬೇಕಾದವರು ಉಪಾಯವಿಲ್ಲದೆ ಖರೀದಿಸಬೇಕಾಯಿತು.
ದಿನಬಳಕೆ ವಸ್ತುಗಳೇ ದುಬಾರಿಯಾಗಿರುವಾಗ ಹಬ್ಬದ ದಿನದಂದು ವ್ಯಾಪಾರ ನಡೆಸುವವರು ದುಬಾರಿ ಬೆಲೆಯ ಮೂಲಕ ಮಾರಾಟ ಮಾಡಿ ಬಡ ಜನತೆಯನ್ನು ಲೂಟಿ ಮಾಡುತ್ತಿದ್ದಾರೆ. ಶ್ರಮಕ್ಕೆ ತಕ್ಕ ಬೆಲೆ ಕಟ್ಟಲಿ. ಆದರೆ ವಿಪರೀತ ಬೆಲೆ ಪಡೆಯುವ ಮೂಲಕ ಜನರನ್ನು ವಂಚಿಸುವುದು ಸಮಂಜಸವಲ್ಲ ಅನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಖಾಯಂ ಅಂಗಡಿ ಹೊಂದಿರುವವರು ಬಾಡಿಗೆ, ನಗರಸಭೆಗೆ ತೆರಿಗೆ ಕಟ್ಟಿ ವ್ಯಾಪಾರ ನಡೆಸುತ್ತಾರೆ. ಆದರೆ ತುಂಬಾ ವ್ಯಾಪಾರ ನಡೆಯುವ ಹಬ್ಬದ ದಿನದಂದೇ ಹೊರಜಿಲ್ಲೆಗಳಿಂದ ಬರುವ ವ್ಯಾಪಾರಿಗಳಿಂದಾಗಿ ಅಂಗಡಿಯವರು ನಷ್ಟ ಅನುಭವಿಸುತ್ತಿದ್ದಾರೆನ್ನುವ ಆರೋಪ ಅಂಗಡಿ ಮಾಲೀಕರದ್ದಾಗಿದೆ.


