ಉಳ್ಳಾಲ: ತೊಕ್ಕೊಟ್ಟು ಸಂತೋಷನಗರದ ನಿವಾಸಿ ಕೊಲೆ ಆರೋಪಿ ಲ್ಯಾನ್ಸಿ ಡಿಸೋಜಾ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತರನ್ನು ತೊಕ್ಕೊಟ್ಟು ನಿವಾಸಿ ದೀಕ್ಷಿತ್ (27), ಅಡ್ಯಾರುಪದವು ನಿವಾಸಿ ರತನ್ (22), ಮೊಗವೀರಪಟ್ನ ನಿವಾಸಿ ಸುಜನ್ (25), ಸೋಮೇಶ್ವರ ನಿವಾಸಿ ವಿವೇಕ್ (26) ಹಾಗೂ ಕಾಪಿಕಾಡು ನಿವಾಸಿ ಪವನ್ (19) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆ.9 ರಂದು ವೆಲ್ಡಿಂಗ್ ಕೆಲಸ ಮುಗಿಸಿ ತೊಕ್ಕೊಟ್ಟು ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದ ಲ್ಯಾನ್ಸಿ ಡಿಸೋಜಾ ಸ್ಕೂಟರಿಗೆ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಅಪಘಾತ ನಡೆಸಿ ಬಳಿಕ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ಕೊಲೆ ನಡೆಸಲೆಂದೇ ಬಂದಿದ್ದ ತಂಡದವರ ಕಾರು ಡಿಕ್ಕಿ ಹೊಡೆದ ಸ್ಕೂಟರಿಗೆ ಸಿಲುಕಿದ ಪರಿಣಾಮ ಕೃತ್ಯವನ್ನು ನಡೆಸಲು ವಿಫಲವಾಗಿ ಓಡಿ ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಸೋಮೇಶ್ವರದ ಕೇಶವ ಯಾನೆ ಚೋನಿ, ಪ್ರಶಾಂತ್ ಹಾಗೂ ರಕ್ಷಿತ್ ಎಂಬವರು ತಲೆಮರೆಸಿಕೊಂಡಿದ್ದಾರೆ. ಹಿಂದು ಜಾಗರಣಾ ವೇದಿಕೆ ಮುಖಂಡ ಯತೀಶ್ ಪೂಜಾರಿ ಹತ್ಯೆಗೆ ಪ್ರತೀಕಾರವಾಗಿ ಆತನ ಕೊಲೆಯಲ್ಲಿ ಪ್ರಮುಖನಾಗಿದ್ದ ಲ್ಯಾನ್ಸಿ ಡಿಸೋಜಾ ಹತ್ಯಾಯತ್ನ ನಡೆದಿದೆ.

