ಬಂಟ್ವಾಳ: ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆಯನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ ಎನ್ನುವ ವಿಚಾರವಾಗಿ ಆಡಳಿತ ಹಾಗೂ ವಿಪಕ್ಷದ ನಡುವೆ ಗದ್ದಲಕ್ಕೆ ಪುರಸಭೆಯ ಸಾಮಾನ್ಯ ಸಭೆ ವೇದಿಕೆ ಮಾಡಿಕೊಟ್ಟಿತು.
ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಹಿಂದಿನ ಸಭೆಯ ನಡವಳಿಗಳನ್ನು ಓದಿ ಹೇಳಲಾಯಿತು. ಈ ಸಂದರ್ಭ ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಮಾತನಾಡಿ ಕಾನೂನು ಬಾಹಿರವಾಗಿ ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಕಡಿಮೆ ಬಿಡ್ ನಮೂದಿಸಿದ ವ್ಯಕ್ತಿಗೆ ಕಸ ವಿಲೇವಾರಿಯ ಗುತ್ತಿಗೆ ನೀಡುವ ಬದಲು ಹೆಚ್ಚು ಮೊತ್ತ ನಮೂದಿಸಿ ವ್ಯಕ್ತಿಗೆ ಗುತ್ತಿಗೆ ನೀಡಿರುವುದು ಸರಿಯೇ ? ಎಂದು ಪ್ರಶ್ನಿಸಿದರು.

1

 

2

ಈ ಹಿಂದಿನ ಗುತ್ತಿಗೆದಾರ, ಸದಸ್ಯರೂ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸದ ನಿರ್ಲಕ್ಷ ವಹಿಸುತ್ತಿದ್ದರು. ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಅಂತಹ ಗುತ್ತಿಗೆದಾರನಿಗೆ ಮತ್ತೆ ಗುತ್ತಿಗೆ ನೀಡಿದರೆ ಕಸ ವಿಲೇವಾರಿ ಕೆಲಸ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿಲ್ಲದೆ ಇರುವುದರಿಂದ ಕಡಿಮೆ ಬಿಡ್ ನಮೂದಿಸಿದರೂ ಗುತ್ತಿಗೆ ನೀಡಲಾಗಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ ಈ ಕ್ರಮವನ್ನು ಸಮರ್ಥಿಸಿಕೊಂಡರು. ಆಡಳಿತ ಪಕ್ಷದ ಸದಸದ್ಯರಾದ ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಮಹಮ್ಮದ್ ಶರೀಪ್ ಹಾಗೂ ಪ್ರವೀಣ್ ಬಿ. ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ಈ ಸಂದರ್ಭ ವಿರೋಧಪಕ್ಷದವರು ಗುತ್ತಿಗೆದಾರ ಶರತ್ ಶೆಟ್ಟಿಯ ಪರವೇ ಎಂದು ಸದಾಶಿವ ಬಂಗೇರಾ ಪಶ್ನಿಸಿದಾಗ ವಿಪಕ್ಷ ಸದಸ್ಯ ಗೋವಿಂದ ಪ್ರಭು ಹೌದು ಎಂದಿದ್ದು ಆಡಳಿತ ಪಕ್ಷದವರನ್ನು ಮತ್ತೆ ಕೆರಳಿಸಿತು. ಈ ಸಂದರ್ಭ ಮಧ್ಯ ಪ್ರವೇಶಿಸಿದ ದೇವದಾಸ ಶೆಟ್ಟಿ ನಾವು ಶರತ್ ಶೆಟ್ಟಿಗೆ ಗುತ್ತಿಗೆ ನೀಡಿ ಎಂದು ಹೇಳುತ್ತಿಲ್ಲ. ಯಾರಿಗೆ ಬೇಕಾದರೂ ಗುತ್ತಿಗೆ ನೀಡಿ ಆದರೆ ಕಾನೂನು ಪ್ರಕಾರವಾಗಿ ನೀಡಿ ಎಂದರು. ಸುದೀರ್ಘ ಸಮಯ ಒಂದೇ ವಿಚಾರವಾಗಿ ಆರೋಪ-ಪ್ರತ್ಯಾರೋಪಗಳು ನಡೆದರೂ ಚರ್ಚೆ   ಅಂತ್ಯ ಪಡೆಯುವಲ್ಲಿ ವಿಫಲವಾಯಿತು. ಬಿ.ಸಿ.ರೋಡಿನ ಮುಖ್ಯವೃತ್ತದಲ್ಲಿ ಕಸದ ರಾಶಿ ದುರ್ನಾತ ಬೀರುತ್ತಿದ್ದರೂ ಗುತ್ತಿಗೆದಾರನನ್ನು ಪ್ರಶಂಸಿಸುವ ಭರದಲ್ಲಿ ಈಗ ಮುಖ್ಯವೃತದ ಬಳಿ ಒಂದು ಚೂರು ಕಸ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಮಹಮ್ಮದ್ ನಂದರಬೆಟ್ಟು ಹೇಳಿರುವುದು ಆಡಳಿತ ಪಕ್ಷದ ಸದಸ್ಯರೇ ನಗುವಂತೆ ಮಾಡಿತು.
ವಿಪಕ್ಷ ಸದಸ್ಯರ ಸಭಾತ್ಯಾಗ
ಗ್ಯಾಸ್ ವಿತರಣೆಯಲ್ಲಿನ ಆಡಳಿತ ಪಕ್ಷದ ತಾರತಮ್ಯ ನೀತಿಯನ್ನು ವಿರೋಧಿಸಿ ವಿಪಕ್ಷದ ಐದು ಮಂದಿ ಸದಸ್ಯರು ಸಭಾತ್ಯಾಗ ನಡೆಸಿದರು. ಗ್ಯಾಸ್ ಹಂಚಿಕೆಯಲ್ಲಿ ವಿಪಕ್ಷ ಸದಸ್ಯರ ವಾರ್ಡ್ಗಳನ್ನು ಕಡೆಗಣಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ಬಯಸಿದರೆ ಅಧ್ಯಕ್ಷರು ಹಾರಿಕೆಯ ಉತ್ತರವನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಸದಸ್ಯರು ಸಭೆಯಿಂದ ಹೊರ ನಡೆದರು.
ಬಿ.ಸಿ.ರೋಡು ವೃತ್ತಕ್ಕೆ ನಾಮಕರಣ:
ಬಿ.ಸಿ.ರೋಡಿನ ಮುಖ್ಯವೃತ್ತಕ್ಕೆ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ನಾಮಕರಣ ಮಾಡಲು ಸಭೆ ನಿರ್ಣಯ ಕೈಗೊಂಡಿತು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಈ ಹೆಸರನ್ನು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿತ್ತು. ಪಾಣೆಮಂಗಳೂರಿನ ಹೊಸ ಸೇತುವೆಯಲ್ಲಿ ಕಳೆದ ಹಲವು ವರ್ಷಗಳಿಂದ ಬೆಳಕು ನೀಡದೆ ಉಳಿದಿದ್ದ ಬೀದಿದೀಪಗಳ ದುರಸ್ತಿ ಮತ್ತು ನಿರ್ವಹಣೆಯನ್ನು ಪುರಸಭೆಯ ವತಿಯಿಂದ ಕೈಗೊಳ್ಳಲು  ತೀರ್ಮಾನಿಸಲಾಯಿತು. ವಿದ್ಯಾರ್ಥಿ  ವೇತನ ಹಂಚಿಕೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಿ ಆಡಳಿತ ಪಕ್ಷದ ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಸಮಗ್ರ ಒಳಚರಂಡಿ ಯೋಜನೆಯ ಬಗ್ಗೆ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಎಂಜಿನೀಯರ್ ಶೋಭಾ ಲತಾ ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಯಾಸ್ಮೀನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಸದಸ್ಯರಾದ ಸದಾಶಿವ ಬಂಗೇರಾ, ವಾಸುಪೂಜಾರಿ, ದೇವದಾಸ ಶೆಟ್ಟಿ, ಗೋವಿಂದ ಪ್ರಭು, ರಾಮಕೃಷ್ಣ ಆಳ್ವ, ಪ್ರವೀಣ್ ಬಿ. ಮಹಮ್ಮದ್ ಶರೀಫ್, ಗಂಗಾಧರ, ಮಹಮ್ಮದ್ ನಂದರಬೆಟ್ಟು, ಇಕ್ಬಾಲ್, ಮೊನೀಶ್ ಆಲಿ, ಚರ್ಚೆಯಲ್ಲಿ ಭಾಗವಹಿಸಿದ್ದರು.

By Suddi9

Leave a Reply

Your email address will not be published. Required fields are marked *