ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ರೆಂಗೇಲು ಮತ್ತು ಬೋಳಂಗಡಿ ಮತ್ತಿತರ ಪ್ರಕೇಶದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರು ಇಲ್ಲದೆ ಒಳಚರಂಡಿ ಕಾಮಗಾರಿಯೂ ಕಳಪೆಯಿಂದ ಕೂಡಿದ್ದು, ಮಳೆಗೆ ಅಲ್ಲಲ್ಲಿ ಕುಸಿದು ಬೀಳುತ್ತಿದೆ ಎಂದು ಸ್ಥಳೀಯರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.

ಈ ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಮಳೆಗಾಲದಲ್ಲಿಯೂ ಕುಡಿಯುವ ನೀರು ಪೂರೈಸಲು ಅಸಾಧ್ಯವಾಗಿರುವ ಪುರಸಭೆ ಇದ್ದರೂ ಏನು ಪ್ರಯೋಜನ…? ಇಲ್ಲಿನ ಸಮಸ್ಯೆಗಳ ಬಗ್ಗೆ ದೂರವಾಣಿ ಕರೆ ಮಾಡಿ ದೂರಿಕೊಂಡರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎಂಜಿನಿಯರ್ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಗೂಡಿನಬಳಿ ಜ್ಯಾಕ್ವೆಲ್ ಕುಸಿತಕ್ಕೀಡಾಗಿದ್ದು, ನೇರವಾಗಿ ನೇತ್ರಾವತಿ ನದಿಯಿಂದ ಕೆಂಪು ನೀರನ್ನು ನೇರವಾಗಿ ಪೂರೈಸಲಾಗುತ್ತಿದೆ. ಕೆಟ್ಟು ಹೋಗಿರುವ ಪಂಪ್ ದುರಸ್ತಿಗೊಳಿಸದೆ, ಇಲ್ಲಿನ ಹದಗೆಟ್ಟ ಒಳಚರಂಡಿ ಸಮರ್ಪಕವಾಗಿ ದುರಸ್ತಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿ ಪುರಸಭೆ ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಾ ಪುರಸಭೆಯಲ್ಲಿ ನಡೆಯಲಿದ್ದ ಸಾಮಾನ್ಯ ಸಭೆಗೆ ಬಿಸಿ ಮುಟ್ಟಿಸಿದರು.
ಹೋರಾಟ ಸಮಿತಿ ಪ್ರಮುಖರಾದ ಶೇಖರ್ ರೆಂಗೇಲು, ಸತೀಶ ಮೆಲ್ಕಾರ್, ಉಮರಬ್ಬ ಮತ್ತಿತರರು ಇದ್ದರು. ಬಂಟ್ವಾಳ ನಗರ ಠಾಣಾಧಿಕಾರಿ ನಂದ ಕುಮಾರ್, ಎಎಸೈ ಸಂಜೀವ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಎಂಜಿನಿಯರ್ ಪ್ರಭಾದೇವಿ, ಡೊಮಿನಿಕ್ ಡಿಮೆಲ್ಲೊ ಮತ್ತಿತರರು ಪ್ರತಿಭಟನಾಕಾರರಲ್ಲಿ ಮಾತುಕತೆ ನಡೆಸಿ ಮನವಿ ಸ್ವೀಕರಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.
