ಮೂಡುಬಿದಿರೆ: ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿರುವ ಸಹೋದರಿ, ಕುಸಿಯುವ ಹಂತದಲ್ಲಿ ಮನೆ, ದಿನವೂ ನರಕ ಯಾತನೆ. ಇದು ಕೋಟೆಬಾಗಿಲಿನ ರಾಜೀವಿ ಹಾಗೂ ಅವರ ಸಹೋದರಿ ಮಾನಸಿಕ ಅಸ್ವಸ್ಥೆ ಚಂದ್ರಾವತಿ ಶೋಚನೀಯ ಸ್ಥಿತಿ.
ರಾಜೀವಿ ಪೂಜಾರ್ತಿ (65) ಹಾಗೂ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿರುವ ಚಂದ್ರಾವತಿ ಪೂಜಾರ್ತಿ (70ವ) ಪ್ಲಾಸ್ಟಿಕ್ ಹೊದಿಕೆಯಿರುವ ಅಸುರಕ್ಷಿತ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
11 mood rajeevi  1

10 mood kotebagilu house(2)
ಮನೆಯಲ್ಲಿ ಮೂರು ಕೋಣೆಗಳಿದ್ದು ಅದರಲ್ಲಿ ಎರಡು ಕೋಣೆಗಳಲ್ಲಿ ಹಳತ್ತಾದ ಬಟ್ಟೆಗಳು, ಕಟ್ಟಿಗೆಗಳ ರಾಶಿಗಳು ತುಂಬಿಕೊಂಡಿದೆಯಲ್ಲದೆ ಹುತ್ತಗಳು ಬೆಳೆದು ನಿಂತಿವೆ. ಇನ್ನೊಂದು ಕೋಣೆಯಲ್ಲಿ ಬಟ್ಟೆಗಳ ರಾಶಿ, ತೆಂಗಿನ ಕಾಯಿಯ ರಾಶಿ ಮತ್ತು ಅಡಿಗೆ ಪಾತ್ರೆಗಳ ರಾಶಿಯ ಮಧ್ಯೆಯೇ ಇಬ್ಬರು ಹೆಂಗಳೆಯರ ಊಟೋಪಾಚಾರ ಮತ್ತು ನಿದ್ದೆಯ ಜಾಗ. ಮರಗಳು, ಪೊದೆಗಳ ಮಧ್ಯೆಯೇ ಇರುವ ಈ ಮನೆಗೆ ವಿದ್ಯುತ್ ಮತ್ತು ಶೌಚಾಲಯದ ವ್ಯವಸ್ಥೆ ಇಲ್ಲ. ಮನೆಯ ಸುತ್ತ-ಮುತ್ತ ಹಾಗೂ ಒಳಗಡೆ ಅಸ್ವಚ್ಛತೆ ಇದ್ದು ಮಳೆ ಬಂದಾಗ ನೀರು ಒಳಗಡೆ ಬಿದ್ದಿರುವುದರಿಂದ ವಾಸನೆಯಿಂದ ಕೂಡಿದೆ ಹಾಗೂ ಮನೆಯ ಸುತ್ತಲೂ ನೀರು ತುಂಬಿಕೊಂಡಿರುವುದರಿಂದ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ. ಮಳೆಯ ನೀರು ಒಳಗೆ ಬಿದ್ದು ಮಲಗಲು ಜಾಗವಿಲ್ಲದೆ ಕೋಣೆಯ ಒಂದು ಮೂಲೆಯಲ್ಲಿ ಬೆಳಗಿನವರೆಗೆ ಕುಳಿತುಕೊಂಡೇ ಕಾಲ ಕಳೆಯುತ್ತಿದ್ದ ಇವರಿಬ್ಬರ ಸ್ಥಿತಿಯನ್ನು ಕಂಡಿರುವ ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಅವರು ಮನೆಯ ಒಂದು ಕೊಣೆಗೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿ ಮಲಗಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.
ಮನೆಯ ಸುತ್ತಲೂ ಬಿರುಕು ಬಿಟ್ಟಿದೆ, ಮಾಡಿನ ಜಂತಿಗಳು ಬೀಳುವ ಸ್ಥಿತಿಯಲ್ಲಿವೆಯಲ್ಲದೆ ಮನೆಗೆ ಅಂಟಿಕೊಂಡೇ ಸುತ್ತಲೂ ದೊಡ್ಡದಾದ ಮರಗಳು ಇದ್ದು ಇದು ಉರುಳಿ ಬಿದ್ದರೆ ಇಬ್ಬರೂ ಹೆಂಗಳೆಯರ ಪ್ರಾಣಕ್ಕೂ ಅಪಾಯವಿದೆ.
ಚಂದ್ರಾವತಿ ಅವರು 30 ವರ್ಷಗಳ ಹಿಂದೆ ಶಿಕ್ಷಕಿಯಾಗಿದ್ದು ತದ ನಂತರ ಮಾನಸಿಕ ತೊಂದರೆಯಿಂದ ಬಳಲಿದಾಗ ಉದ್ಯೋಗವನ್ನು ಬಿಟ್ಟಿದ್ದಾರೆ. ಚಂದ್ರಾವತಿ ಅವರಿಗೆ ಸರ್ಕಾರದಿಂದ ಸಂಧ್ಯಾ ಸುರಕ್ಷದ ಭತ್ಯೆ 500 ರೂ ಬರುತ್ತಿದ್ದರೆ ರಾಜೀವಿ ಅವರಿಗೆ ವಿಧವಾ ವೇತನದ 500 ರೂ ಬರುತ್ತಿದ್ದು ಇದರಲ್ಲಿ ಸ್ವಲ್ಪ ಜೀವನ ನಡೆಸುತ್ತಿದ್ದಾರೆ. ಉಳಿದ ದಿನಗಳಲ್ಲಿ ಅವರಿವರ ಮನೆಗೆ ಹೋಗಿ ಕಾಡಿಬೇಡಿ ಊಟ ಮಾಡುತ್ತಿದ್ದಾರೆ ಅಲ್ಲದೆ ಚಂದ್ರಾವತಿ ಅವರು ಕೆಲವೊಂದು ಸಲ ಮನೆಯಿಂದ ಹೊರ ಹೋದರೆ ಯಾರಾದರೂ ತಂದು ಮನೆಗೆ ಬಿಡಬೇಕಾದಂತಹ ಪರಿಸ್ಥಿತಿ ಇದೆ.

By suddi9

Leave a Reply

Your email address will not be published. Required fields are marked *