ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮ ಪಂಚಾಯಿತಿನಲ್ಲಿ ಗುರುವಾರ ನಡೆದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಒಟ್ಟು 127 ಮಂದಿ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರ ನೀಡಲಾಯಿತು.
ಇಲ್ಲಿನ ಸಜಿಪಮೂಡ, ಸಜಿಪಮುನ್ನೂರು, ಪಾಣೆಮಂಗಳೂರು, ನರಿಕೊಂಬು, ಶಂಭೂರು, ಬಾಳ್ತಿಲ, ಕಡೇಶ್ವಾಲ್ಯ, ಬರಿಮಾರು, ಅಮ್ಟೂರು, ಗೋಳ್ತಮಜಲು ಹೀಗೆ ಒಟ್ಟು ಹತ್ತು ಗ್ರಾಮಗಳಿಗೆ ಸಂಬಂಧಿಸಿದಂತೆ ಅದಾಲತ್ ಆಯೋಜಿಸಲಾಗಿತ್ತು.
ಇಲ್ಲಿನ ಪಂಚಾಯಿತಿ ನೂತನ ಅಧ್ಯಕ್ಷೆ ಜಯಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ವಿಠಲ ಎನ್., ತಾ.ಪಂ.ಸದಸ್ಯ ಆನಂದ ಎ. ಶಂಭೂರು ಮತ್ತಿತರರು ಮಾತನಾಡಿದರು.
ಗ್ರಾ.ಪಂ. ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫಾ, ಸಜಿಪಮೂಡ ಗ್ರಾ.ಪಂ. ಅಧ್ಯಕ್ಷ ಗಣಪತಿ ಭಟ್, ಬಂಟ್ವಾಳ ಪುರಸಭಾ ಸದಸ್ಯೆ ಚಂಚಲಾಕ್ಷಿ ಮತ್ತಿತರರು ಇದ್ದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 65 ಕಡತಗಳು ಮತ್ತು ಪಿಂಚಣಿಗೆ ಸಂಬಂಧಿಸಿದಂತೆ 62 ಕಡತಗಳನ್ನು ಸ್ಥಳದಲ್ಲಿಯೇ ವಿಲೇವಾರಿಗೊಳಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದರು.
ಉಪ ತಹಶೀಲ್ದಾರ್ ವಾಮನ, ಜೆ.ಸಿ.ರೊಡ್ರಿಗಸ್, ಕಂದಾಯ ನಿರೀಕ್ಷಕ ಎ.ಪಿ.ಭಟ್, ವಿನೋದ, ಶಿವಪ್ಪ, ತೌಫೀಕ್ ಮತ್ತಿತರರು ಪಾಲ್ಗೊಂಡಿದ್ದರು.
