ವಿರಾಟ್ ಕೊಹ್ಲಿ ಅವರ ಆಕರ್ಷಕ ಬ್ಯಾಟಿಂಗ್ ಹಾಗೂ ಆಪ್ ಸ್ಪಿನ್ನರ್ ಆರ್ ಅಶ್ವಿನ್ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

2007ರ ಟಿ20 ಪಂದ್ಯಾವಳಿಯ ಬಳಿಕ ಇದೇ ಮೊದಲ ಬಾರಿಗೆ ಧೋನಿ ತಂಡ ಫೈನಲ್ ಪ್ರವೇಶಿಸಿದೆ. ರವಿವಾರ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆಯಲಿರುವ ಅಂತಿಮ ಕಾಳಗದಲ್ಲಿ ಭಾರತ ಹಾಲಿ ರನ್ನರ್ ಅಪ್ ಶ್ರೀಲಂಕಾ ವಿರುದ್ಧ ಟಿ20 ವಿಶ್ವಕಪ್ ಟ್ರೋಫಿಗಾಗಿ ಸೆಣಸಾಡಲಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 172 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಮೂರನೇ ವಿಕೆಟ್‌ಗೆ ನಾಯಕ ಫಾಪ್ ಡು ಪ್ಲೆಸಿಸ್(58) ಮತ್ತು ಜೀನ್ ಪಾಲ್ ಡುಮಿನಿ(45) ಜೊತೆಯಾಟದಲ್ಲಿ 52 ಬಾಲ್‌ಗಳನ್ನು ಎದುರಿಸಿ 71 ರನ್‌ಗಳನ್ನು ಕಲೆಹಾಕಿದರು. ಹತ್ತು ಓವರ್‌ಗಳ ನಂತರ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ದಕ್ಷಿಣ ಆಫ್ರಿಕಾ ರೈನಾ ಎಸೆದ 12ನೇ ಓವರ್‌ನಲ್ಲಿ 16 ರನ್ ಹಾಗೂ ಮಿಶ್ರಾ ಎಸೆದ 13ನೇ ಓವರ್‌ನಲ್ಲಿ 17 ರನ್‌ ಗಳಿಸಿತು. ಅಂತೂ ನಿಗದಿತ 20 ಓವರ್‌ಗಳನ್ನು ಆಡಿ ಭಾರತಕ್ಕೆ ಗೆಲ್ಲಲು 172 ರನ್ನಗಳ ಬೃಹತ್ ಮೊತ್ತದ ಸವಾಲು ಹಾಕಿತು.

ಭಾರತದ ಇನ್ನಿಂಗ್ಸ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ 39 ರನ್‌ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ತಂಡದ ಮೊತ್ತ 77 ಆಗಿದ್ದಾಗ 32 ರನ್‌ಗಳಿಸಿ ಆಡುತ್ತಿದ್ದ ಅಜಿಂಕ್ಯ ಔಟಾದರು. ಮೂರನೆ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ 6.3 ಓವರ್‌ಗಳಲ್ಲಿ 56 ರನ್‌ಗಳಿಸಿ ತಂಡವನ್ನು 133ಕ್ಕೆ ಕೊಂಡೊಯ್ದರು. 18 ರನ್‌ಗಳಿಸಿ ಆಡುತ್ತಿದ್ದ ಯುವರಾಜ್ ಸಿಂಗ್ ಇಮ್ರಾನ್ ತಾಹೀರ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. 

 

ನಾಲ್ಕನೇ ವಿಕೆಟ್‌ಗೆ ಜೊತೆಯಾದ ಸುರೇಶ ರೈನಾ 10 ಎಸೆತಗಳಲ್ಲಿ 21 ರನ್‌ಗಳಿಸಿ ರನ್ ಔಟಾದರು. ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಪ್ರದಶಿಸಿ ಕೇವಲ 44 ಎಸೆತಗಳಲ್ಲಿ 72 ರನ್‌ಗಳಿಸಿ ಅಜೇಯರಾಗುಳಿದರು. ಭಾರತದ ಪರ ಆರ್. ಅಶ್ವಿನ್ 22 ರನ್ ನೀಡಿ ಮೂರು ವಿಕೆಟ್ ಪಡೆದು ಉತ್ತಮ ಬೌಲರ್ ಎನಿಸಿಕೊಂಡರು.

 

By suddi9

Leave a Reply

Your email address will not be published. Required fields are marked *