ಮುಂಬಯಿ :(ಕೆ.ಆರ್.ಪೇಟೆ), ಜೂ.10: ದೇಶದ ಬೆನ್ನೆಲುಬಾದ ರೈತರು ಆಧುನಿಕ ವ್ಯವಸಾಯ ಕ್ರಮವನ್ನು ತೆಂಗು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಧಿಕಲಾಭಗಳಿಸಬಹುದೆಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್.ರಮೇಶ್ ಅಭಿಪ್ರಾಯಪಟ್ಟರು.
ರಮೇಶ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ತಾಲೂಕಿನ ಅಘಲಯ ಗ್ರಾಮದ ಶ್ರೀ ಕಾಲಭೈರವೇಶ್ವರ ಸಮುಧಾಯ ಭವನದಲ್ಲಿ ಏರ್ಪಡಿಸಿದ್ದ ತೆಂಗಿನ ಕೃಷಿ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಒಂದು ಕಾಲದಲ್ಲಿ ತೆಂಗಿನ ಬೆಳೆಗೆ ಉತ್ತಮ ಬೆಲೆ ಮಾರುಕಟ್ಟೆಯಲ್ಲ್ಲಿ ಸಿಗುತ್ತಿರಲಿಲ್ಲ. ಆದರೆ ಇಂದು ಮಾರುಕಟ್ಟೆಯಲ್ಲಿ ತೆಂಗಿನ ಕಾಯಿಗೆ ಉತ್ತಮ ಬೆಲೆ ಇದೆ. ಒಂದೆರಡು ತೆಂಗಿನ ಮರವಿದ್ದರೂ ಜೀವನ ಸಾಗಿಸುವುದು ಕಷ್ಟವಲ್ಲ. ಆದ್ದರಿಂದ ರೈತರು ಆಧುನಿಕ ತೆಂಗು ಕೃಷಿ ವಿಧಾನವನ್ನು ತಮ್ಮ ಕೃಷಿ ಪದ್ದತಿಯಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಮಾಜಿ ಅಧ್ಯಕ್ಷ ಎ.ಎನ್.ಜಾನಕಿರಾಮು ಮಾತನಾಡಿ ಸಂತೆಬಾಚಹಳ್ಳಿ ಹೋಬಳಿಯು ತೆಂಗು ಕೃಷಿಗೆ ಹೆಸರಾಗಿದೆ. ಆದರೆ ಹಲವಾರು ರೋಗಗಳಿಂದ ಉತ್ತಮ ಫಸಲು ರೈತನಿಗೆ ಸಿಗುತ್ತಿಲ್ಲ. ಇದಕ್ಕೆ ನಾವು ಅನುಸರಿಸುತ್ತಿರುವ ಹಳೆಯ ಕೃಷಿಪದ್ದತಿಗಳು ಕಾರಣವಾಗಿ ಹಲವು ರೋಗಗಳಿಗೆ ತುತ್ತಾಗುತ್ತಿದೆ. ಇದನ್ನು ತಡೆಗಟ್ಟಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ವರು ಪ್ರತಿ ಹೋಬಳಿಯಲ್ಲಿಯೂ ರೈತರಿಗೆ ಉಪಯುಕ್ತವಾದ ಇಂತಹ ಕಾರ್ಯಕ್ರಮವನ್ನು ನಡೆಸುತಿದ್ದಾರೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ತಾಲೂಕು ಅಧಿಕಾರಿ ಹೆಚ್.ಆರ್.ಲವಕುಮಾರ್ ತಾಲೂಕಿನಲ್ಲಿ ಶ್ರೀಕ್ಷೇತ್ರದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿಗಳಾದ ಹೆಚ್.ಇ.ಪುಟ್ಟವೀರೇಗೌಡ, ಡಾ| ಎಂ.ಪಿ.ಕುಮಾರ್ ರೈತರೊಂದಿಗೆ ತೆಂಗಿನ ಬೆಳೆಯ ಸಮಸ್ಯೆಗಳ ಸಂವಾದ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ಸಮಾರಂಭದಲ್ಲಿ ಅಘಲಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಎಸ್.ಶ್ರೀಧರ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಂಕರನಾರಾಯಣ, ಎಪಿಎಂಸಿ ಸದಸ್ಯ ಕೆ.ಕಾಳೇಗೌಡ, ಅಘಲಯ ಸ.ಪ.ಪೂಕಾಲೇಜಿನ ಉಪಾದ್ಯಕ್ಷ ಕೆ.ಸಿದ್ದೇಗೌಡ ಮುಖಂಡರಾದ ಶಿವನಂಜೇಗೌಡ, ಯೋಜನೆಯ ಹೋಬಳಿ ಸಂಯೋಜಕ ರುದ್ರೇಶ್ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರುಗಳು ಸೇರಿದಂತೆ ಹಲವರು ಉಪಸ್ಥಿರಿದ್ದರು.

