ಅಹ್ಮದ್’ನಗರ್: ಇಷ್ಟು ದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ ಹಿರಿಯ ಮುಖಂಡ ಲಾಲ್’ಕೃಷ್ಣ ಆಡ್ವಾಣಿ ಈಗ ಮೋದಿ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಇಲ್ಲಿಯ ಸ್ಥಳೀಯ ಬಿಜೆಪಿ ಅಭ್ಯರ್ಥಿ ದಿಲೀಪ್ ಗಾಂಧಿಯ ಪರವಾಗಿ ಚುನಾವಣಾ ಪ್ರಚಾರ ಮಾಡುವ ವೇಳೆ, ಆಡ್ವಾಣಿಯವರು ಮೋದಿಯ ಗುಣಗಾನ ಮಾಡಿದ್ದಾರೆ.ನಾವು ದೇಶದಲ್ಲಿ ಬದಲಾವಣೆ ತರುತ್ತೇವೆ. ನೀವು ದಿಲೀಪ್ ಗಾಂಧಿಗೆ ನೀಡುವ ವೋಟು ಅವರಿಗೆ ಹ್ಯಾಟ್ರಿಕ್ ಗೆಲುವು ತಂದುಕೊಡುವುದರ ಜೊತೆಗೆ ರಾಷ್ಟ್ರದಲ್ಲಿ ಬದಲಾವಣೆಯನ್ನೂ ತರುತ್ತದೆ. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿ, ಬಿಜೆಪಿಗೆ ಅವಕಾಶ ನೀಡಿ ನಂತರ ಬದಲಾವಣೆ ನೋಡಿ ಎಂದು ಬಿಜೆಪಿಗೆ ಮತ ಹಾಕುವಂತೆ ಆಡ್ವಾಣಿ ಕರೆ ನೀಡಿದ್ದಾರೆ.
ಇತ್ತೀಚಿನ ಕೆಲ ದಿನಗಳ ಹಿಂದಿನವರೆಗೂ ಮೋದಿ ಬಗ್ಗೆ ಆಡ್ವಾಣಿಗೆ ತೀವ್ರ ಆಕ್ಷೇಪಗಳಿದ್ದವು. ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಳಿಕವಂತೂ ಇವರು ಬಹಿರಂಗವಾಗೇ ಅಸಮಾಧಾನ ತೋರ್ಪಡಿಸುತ್ತಲೇ ಬಂದಿದ್ದರು. ಗುಜರಾತ್’ನ ಅಹ್ಮದಾಬಾದ್ ಬದಲು ತಾನು ಮಧ್ಯಪ್ರದೇಶದ ಭೋಪಾಲ್’ನಿಂದ ಸ್ಪರ್ಧಿಸುತ್ತೇನೆ ಎಂದು ಪಟ್ಟುಹಿಡಿಯುವ ಮೂಲಕ ಮೋದಿಯಿಂದ ಇನ್ನಷ್ಟು ದೂರವಾಗಲು ಪ್ರಯತ್ನಿಸಿದ್ದರು. ಆದರೆ ಮೋದಿ ಅಡ್ವಾಣಿಯ ಯಾವುದೇ ಒತ್ತಡಕ್ಕೆ ಮಣಿಯಲೇ ಇಲ್ಲ. ಈ ಹಿನ್ನೆಲೆಯಲ್ಲಿ, ಮೋದಿ ಪರವಾಗಿ ಆಡ್ವಾಣಿ ಬ್ಯಾಟಿಂಗ್ ನಡೆಸಿರುವುದು ಎಲ್ಲರನ್ನೂ ಚಕಿತಗೊಳಿಸಿದೆ.

