ದೂರವಾಗಲಿ ಮಕ್ಕಳ ದಿಗಿಲು-ಶಾಲೆಯಾಗಲಿ ಅಮ್ಮನ ಅಕ್ಕರೆಯ ಮಡಿಲು
ರಜೆಯ ಮಜಾ ಮುಗಿದು ಮತ್ತೆ ಮಕ್ಕಳ ದಂಡು ಶಾಲೆಯತ್ತ ಹೆಜ್ಜೆ ಇಟ್ಟಿದೆ. ಕೆಲವು ಮಕ್ಕಳಿಗೆ ಅದೇ ಶಾಲೆ, ಆದರೆ ಬೇರೆ ತರಗತಿ, ಒಂದಷ್ಟು ಬೇರೆ ಶಿಕ್ಷಕರು. ಕೆಲವು ಮಕ್ಕಳಿಗಂತೂ ಎಲ್ಲವೂ ಹೊಸತೇ. ಶಾಲೆಗೇ ಹೊರಟ ಮಕ್ಕಳ ಮುಖದಲ್ಲೂ-ಮುಖದ ನಗುವಿನಲ್ಲೂ ನಾನಾ ರೀತಿ, ಯಾಕೆ ಎಂದರೆ ಶಾಲೆ ಎಂದರೆ ಕೆಲವರಿಗೆ ಪ್ರೀತಿ-ಮತ್ತೆ ಕೆಲವರಿಗೆ ಭೀತಿ.
ಹೌದು, ಶಾಲೆ ಎಂದರೆ ಮಕ್ಕಳ ಪಾಲಿಗೆ ಅದು ಬರೀಯ ಕಟ್ಟಡವಲ್ಲ. ಊರ ಮಕ್ಕಳನ್ನು ಒಂದೆಡೆ ಕೂಡಿಡುವ ಸಂಗ್ರಾಲಯವೂ ಅಲ್ಲ. ಅದೇ ಜ್ನಾನಾಲಯ, ಅದೇ ದೇವಾಲಯ. ಮಕ್ಕಳು ನಿತ್ಯ ನೆನೆಯಬೇಕಾದ, ಗೌರವಿಸಬೇಕಾದ, ಪೂಜಿಸಬೇಕಾದ ಪುಣ್ಯಾಲಯ. ಇಲ್ಲಿಗೆ ಬರುವ ಮಕ್ಕಳು ಮನೆಯ, ಅದರಲ್ಲೂ ತಾಯಿಯ ಪ್ರೀತಿ ಇರುವ ಮನೆಯ ವಾತಾವರಣ ಬೇಕೆಂದು ಬಯಸುವುದು ನಿಜಕ್ಕೂ ತಪ್ಪಲ್ಲ.
School-jan-30
ಮುದ್ದುಮೊಗದ ಪುಟ್ಟ ಕಂದಮ್ಮಗಳೆಂದರೆನೇ ಅದು ಲವಲವಿಕೆ, ಕ್ರಿಯಾಶೀಲತೆ, ಸೃಜನಶೀಲತೆ, ಕುತೂಹಲ, ಉತ್ಸಾಹಗಳ ಪ್ರತಿಬಿಂಬ. ಇವೆಲ್ಲವನ್ನೂ ಒಂದೆಡೆ ಕಟ್ಟಿಡುವುದು ಸುಲಭದ ಮಾತಲ್ಲ, ಕಟ್ಟಿಡುವುದು ಸಾಧುವೂ ಅಲ್ಲ. ಅದಕ್ಕಾಗಿ ಶಾಲೆಗಳು ಸದಾ ಜೀವಂತಿಕೆಯ ತಾಣಗಳಾಗಬೇಕು, ಮಕ್ಕಳ ಮಧುರ ಭಾವನೆಗಳು ಚಿಗುರೊಡೆಯುವ ನೆಲೆಯಾಗಬೇಕು, ಆಟ ಪಾಠ ಆಡು ಹಾಡಿನ ಕಡಲಾಗಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ ಶಾಲೆಯೊಂದು ಮಗುವಿಗೆ ಅಮ್ಮನ ಅಕ್ಕರೆಯ ಮಡಿಲು ಆಗಬೇಕು. ಆಗ ಶಾಲೆ ಮಕ್ಕಳಿಗೆ ಆಕರ್ಷಣೆಯಾಗುತ್ತದೆ, ಮಗುಸ್ನೇಹಿಯಾಗುತ್ತದೆ.
ಯಾವುದೇ ಮಗು ಎಲ್ಲಿದ್ದರೂ, ಹೇಗಿದ್ದರೂ ಆಗಾಗ್ಗೆ ತನ್ನ ತಾಯಿಯನ್ನು-ತಾಯಿ ಮನೆಯನ್ನು ನೆನೆಯುವಂತೆ ತನ್ನ ಶಾಲೆಯನ್ನು-ಶಿಕ್ಷಕರನ್ನು ನೆನೆಯಬೇಕು. ಇದೂ ನನ್ನ ಮನೆಯೇ. ಇಲ್ಲಿರುವವರು ನನ್ನ ತಾಯಿಯಂತೆ ಎಂದು ಮಕ್ಕಳು ಭಾವಿಸುವ ವಾತಾವರಣ ಶಾಲೆಯಲ್ಲಿ ಸೃಷ್ಠಿಯಾಗಬೇಕು. ಮಗು ತಪ್ಪು ಮಾಡಿದ್ದರೂ ಮನೆಗೆ, ತಾಯಿಯೆಡೆಗೆ ಹೋಗಲು ಭಯಪಡುವುದಿಲ್ಲ. ಯಾಕೆಂದರೆ ಅವರು ನನ್ನ ತಾಯಿ, ನನ್ನನ್ನು ಪ್ರೀತಿಸುತ್ತಾರೆ, ಕ್ಷಮಿಸುತ್ತಾರೆ ಎಂಬ ಭಾವನೆಯೇ ಮಗುವನ್ನು ಮತ್ತೆ ತಾಯಿಯ ಹತ್ತಿರವಾಗಿಸುತ್ತದೆ. ತಪ್ಪು ಮಾಡಿ ಬೈಸಿಕೊಂಡು, ಹೊಡೆದುಕೊಂಡು, ಶಿಕ್ಷಿಸಿಕೊಂಡರೂ ಶಿಕ್ಷೆಯ ಹಿಂದಿನ ಪ್ರೀತಿಯನ್ನು, ಆತ್ಮೀಯತೆಯನ್ನು ತಕ್ಷಣ ಅರ್ಥ ಮಾಡಿಕೊಂಡು ಮತ್ತೆ ತಾಯಿಯನ್ನೇ ನೆಚ್ಚಿಕೊಳ್ಳುತ್ತದೆ. ತಾಯಿ ಮಗುವಿನ ಸಂಬಂಧವೇ ಶಾಲೆಯಲ್ಲೂ ಸೃಷ್ಟಿಯಾದಾಗ ಮಗು ಶಾಲೆಯನ್ನೂ, ಶಿಕ್ಷಕರನ್ನೂ ಪ್ರೀತಿಸುತ್ತದೆ. ಗೌರವಿಸುತ್ತದೆ.
ತಾಯಿಯಾದವಳು ಹಾಗೆ ಅಲ್ಲವೇ. ಮಗುವಿನೊಂದಿಗೆ ಒಮ್ಮೆ ಸ್ನೇಹಿತೆ, ಮತ್ತೊಮ್ಮೆ ತಾಯಿ, ಮಗದೊಮ್ಮೆ ಗುರು, ಮಾರ್ಗದರ್ಶಕಿ, ಚಿಕಿತ್ಸಕಿ, ದೇವರು ಎಲ್ಲವೂ ಆಗುವವಳು. ಅದಕ್ಕಾಗಿ ಮಗುವಿಗೂ ತಾಯಿಯೆಂದರೆ ಪ್ರೀತಿ, ಭಕ್ತಿ, ಸ್ನೇಹ, ಸಂಬಂಧ, ಗೌರವ ಎಲ್ಲವೂ. ತಾಯಿಗೆ ಮಗುವಿನಿಂದ ಸಲ್ಲುವ ಪ್ರೀತಿ, ಸ್ನೇಹ, ಭಕ್ತಿ ಸಮ್ಮಿಶ್ರಣದ ಗೌರವವೇ ಎಲ್ಲಾ ಶಿಕ್ಷಕರಿಗೂ ಮಕ್ಕಳಿಂದ ಸಲ್ಲಬೇಕು ತಾನೆ. ಶಿಕ್ಷೆ ಹೆಚ್ಚು ಇದ್ದಲ್ಲಿ ಭಯ, ದ್ವೇಷವೇ ಹೆಚ್ಚು. ಭಯರಹಿತ ಗೌರವ ಶಿಕ್ಷಕ ವಲಯಕ್ಕೆ ದೊರಕಿದರೆ ನಿಜಕ್ಕೂ ಅವರು ಮಕ್ಕಳ ಪಾಲಿಗೆ ಗುರುಗಳು, ದೇವರು. ಶಿಕ್ಷಕರು ನಮ್ಮನ್ನು ರಕ್ಷಿಸುತ್ತಾರೆ, ಕ್ಷಮಿಸುತ್ತಾರೆ ಎಂಬ ಭಾವನೆಯೇ
ಮಕ್ಕಳಿಂದ ಶಿಕ್ಷಕರನ್ನು ಪೂಜಿಸಲ್ಪಡುತ್ತದೆ.
ಭಯದ ವಾತಾವರಣದಲ್ಲಿ, ಬಂಧನದ ಸ್ಥಿತಿಯಲ್ಲಿ, ಒತ್ತಡದ ಸನ್ನಿವೇಷದಲ್ಲಿ, ಶಿಕ್ಷೆಯ ಭೀತಿಯಲ್ಲಿ ಮಕ್ಕಳು ಕಲಿಯುವುದಾದರೂ ಏನನ್ನು? ಪ್ರೀತಿ ಇಲ್ಲದ ಯಾವ ಕಲಿಕೆಯೂ ಮಕ್ಕಳ ಪಾಲಿಗೆ ಹೊರೆಯಲ್ಲದೆ ಮತ್ತೇನು? ಮಾನವೀಯತೆ ಇಲ್ಲದ ಯಾವುದೇ ನೆಲೆ ಮಕ್ಕಳ ಪಾಲಿಗೆ ಕಲಿಕೆಯ ವಾತಾವರಣವಾಗುವುದು, ಕಲಿಕೆಗೆ ವರದಾನವಾಗುವುದಾದರೂ ಹೇಗೆ? ಮಾನವೀಯತೆಯನ್ನು ಮೀರಿದ ನಿಯಮಗಳು, ಶಾಲಾ ಕಟ್ಟುಪಾಡುಗಳು, ಭೋದನಾ ವಿಧಾನಗಳೆಲ್ಲವೂ ಮಕ್ಕಳ ಪಾಲಿಗೆ ಮಾರಕವಲ್ಲವೇ?
ಯಾವುದೇ ಮಗು ಯಾರದೇ ಒತ್ತಾಯವಿಲ್ಲದೆ ಬೆಳಿಗ್ಗೆ ಬೇಗನೇ ಎದ್ದು ಎಲ್ಲಾ ರೀತಿಯ ಪೂರ್ವಸಿದ್ಧತೆಗಳನ್ನು ಸ್ವಆಸಕ್ತಿಯಿಂದ ತಾನೇ ನಿರ್ವಹಿಸಿ ನಗು ಮೊಗದೊಂದಿಗೆ ಅತೀವ ಉತ್ಸಾಹದೊಂದಿಗೆ ಶಾಲೆಗೆ ಬರಬೇಕು, ಶಾಲೆಯಲ್ಲಿ ಎಲ್ಲಾ ಚಟುವಟಿಕೆಗಳಲ್ಲಿಯೂ ಸಕ್ರೀಯವಾಗಿ ಹುಮ್ಮಸ್ಸಿನಿಂದ ಪಾಲ್ಗೊಳ್ಳಬೇಕು, ಸಂಜೆ ಶಾಲೆಯ ಕೊನೆಯ ಬೆಲ್ ಬಾರಿಸಿದಾಗಲೂ ಮನೆಯತ್ತ ಓಡದೇ ಇನ್ನಷ್ಟು ಹೊತ್ತು ಶಾಲೆಯಲ್ಲಿಯೇ ಇರುವ ಉತ್ಸಾಹ ತೋರಬೇಕು. ಇಂತಹ ಶಾಲೆಗಳೇ ಮಗುಸ್ನೇಹಿ ಶಾಲೆಗಳು. ಈ ಬಾರಿ ಎಲ್ಲಾ ಶಾಲೆಗಳು ಮಗುಸ್ನೇಹಿಯಾಗಲಿ, ಎಲ್ಲಾ ಶಿಕ್ಷಕರು ಮಗುಸ್ನೇಹಿ ಶಿಕ್ಷಕರಾಗಿ ಮಕ್ಕಳ ಮನವ ಗೆಲ್ಲಲಿ ಎಂಬ ಹಾರೈಕೆಯೊಂದಿಗೆ ಶಾಲೆಗೆ ಹೊರಟ ಮಕ್ಕಳೇ ನಿಮ್ಮ ಪಯಣ ಸುಖಕರವಾಗಿರಲಿ…..
ಶಿಕ್ಷಕರನ್ನು ಶಿಕ್ಷಕರಾಗಲು ಬಿಡಬೇಕು:
ನಮ್ಮಲ್ಲಿ ಮಗುಸ್ನೇಹಿ ಶಾಲೆಗಳು ಸಾಕಷ್ಠಿದೆ. ಮಕ್ಕಳ ಸ್ನೇಹಿ ಶಿಕ್ಷಕರೂ ಅಪಾರ ಸಂಖ್ಯೆಯಲ್ಲಿದ್ದಾರೆ. ಆದರೆ ಗುರುತಿಸಲ್ಪಡುವುದು ತೀರಾ ಕಡಿಮೆ. ಅಲ್ಲದೆ ಎಲ್ಲವೂ, ಎಲ್ಲರೂ ಆ ರೀತಿ ಇರಲಿ ನಮ್ಮ ಸಮಾಜ, ಸರಕಾರಿ ವ್ಯವಸ್ಥೆ ಬಿಡುವುದಿಲ್ಲ ಕೂಡ. ವ್ಯವಸ್ಥೆಗೆ ಬೇಕಾಗಿರುವುದು ಮಾರ್ಕ್, ರ್ಯಾಂಕ್ ಅಲ್ಲವೇ? ಶಾಲೆ ಮಗುಸ್ನೇಹಿಯಾಗಬೇಕಾದರೆ, ಶಿಕ್ಷಕರು ಮಕ್ಕಳ ಸ್ನೇಹಿ ಶಿಕ್ಷಕರಾಗಬೇಕಾದರೆ ಮೊದಲು ಶಾಲೆಗಳು ಸ್ಪರ್ಧೆಯಿಂದ, ಅಂಕದ ಅಮಲಿನಿಂದ, ಪ್ರತಿಷ್ಠೆಯಿಂದ ಮುಕ್ತವಾಗಬೇಕು.
ಸಹಜ ಕಲಿಕೆಯ ಕೇಂದ್ರಗಳಾಗಿ ಸಮುದಾಯಕ್ಕೆ ಶಾಲೆಯ ಮೇಲೆ ಪ್ರೀತಿ, ಗೌರವ ಬೆಳೆಯಬೇಕು. ಶಾಲೆಗಳು ಕೇವಲ ಆಡಳಿತ ಮಂಡಳಿ, ಸರಕಾರದ ಶಾಲೆಗಳಾಗದೇ ಅದು ನಿಜಾರ್ಥದಲ್ಲಿ ಸಮುದಾಯದ ಶಾಲೆಯಾಗಬೇಕು. ಶಾಲೆಗಳ ಅಭಿವೃದ್ದಿ ಕೇವಲ ಶಿಕ್ಷಕರ ಜವಾಬ್ದಾರಿಯಾಗದೇ ಅದು ಇಡೀ ಜನಸಮುದಾಯದ ಜವಾಬ್ದಾರಿಯಾಗಬೇಕು. ಸ್ಥಳೀಯಾಡಳಿತಗಳು, ಶಾಲಾಭಿವೃಧ್ದಿ ಸಮಿತಿ, ಪೋಷಕವೃಂದ, ಅಧಿಕಾರಿ ವರ್ಗ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿವೃಂದದ ಸಮನ್ವಯದ, ಸಂಘಟಿತ ಪ್ರಯತ್ನದೊಂದಿಗೆ ಶಾಲೆಗಳು ಸಮಾಜದ ಪ್ರಮುಖ ಕೇಂದ್ರವಾಗಿ ಬೆಳೆಯಬೇಕು.
ಎಲ್ಲಕ್ಕಿಂತಲೂ ಮುಖ್ಯವಾಗಿ ಶಿಕ್ಷಕರನ್ನು ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಲು ಬಿಡಬೇಕು. ಅವರನ್ನು ಎಲ್ಲಾ ರೀತಿಯ ಒತ್ತಡದಿಂದ ಬಿಡುಗಡೆಗೊಳಿಸಿ ಅವರು ಸದಾ ಕಾಲ ಮಕ್ಕಳೊಡನೆ ಪ್ರೀತಿಯಿಂದ ಮುಕ್ತವಾಗಿ ಬೆರೆಯುವ, ಮಾತಾನಾಡಿಸುವ, ಆ ಮೂಲಕ ಕಲಿಯುವ ವಾತಾವರಣ ನಿರ್ಮಾಣಗೊಳ್ಳಬೇಕು. ಮೀಟಿಂಗು, ತರಬೇತಿ, ಕಚೇರಿ ಕೆಲಸ, ದಾಖಲೆಗಳ ತಯಾರಿ, ವರದಿ ಹಸ್ತಾಂತರ ಸಹಿತ ಶಿಕ್ಷಕರ ಪಾಲಿಗೇ ಶಿಕ್ಷೆಯಾಗಿರುವ ಹಲವು ಒತ್ತಡಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಿ ಹೆಚ್ಚು ಕಾಲ ಶಿಕ್ಷಕರು ಮಕ್ಕಳೊಡನೆ ಇರಲು ಅವಕಾಶ ಕಲ್ಪಿಸಬೇಕು.
ಗೋಪಾಲ ಅಂಚನ್

By suddi9

Leave a Reply

Your email address will not be published. Required fields are marked *