ಆತ್ಮರಕ್ಷಣೆಗೆಂದು ಹುಟ್ಟಿಕೊಂಡ ಬಹು ಕಷ್ಟಕರವಾದ ಕಲೆಯಾದ ಕರಾಟೆಯ ಕಲೆಯನ್ನು ಬಾಲ್ಯದಿಂದಲೇ ಕಲಿತು, ಬೆಳೆಸಿ, ಪೋಷಿಸಿ ನಿರಂತರ ಕಲಿಕೆ ಮತ್ತು ಸಾಧನೆಯ ಮೂಲಕ 4ನೇ ಡ್ಯಾನ್ ಬ್ಲ್ಯಾಕ್‍ಬೆಲ್ಟ್ ಪಡೆದಿದ್ದಾರೆ ಸೆನ್ಸಾಯಿ ವಸಂತ.ಕೆ.ಬಂಗೇರ ಅವರು. ಬೆಳ್ತಂಗಡಿ ತಾಲೂಕು ನಾವೂರು ಹೊಡಿಕ್ಕಾರು ನಿವಾಸಿಯಾದ ಇವರು 1994ರಲ್ಲಿ ಮೊದಲ ಗುರುಗಳಾಗಿ ಉಚ್ಚ ನ್ಯಾಯಾಲಯದ ನ್ಯಾಯಾವಾದಿ ರಮೇಶ್ ಪಿ.ಯನ್.ರವರೊಂದಿಗೆ ಕರಾಟೆಯ ಆರಂಭದ ಹೆಜ್ಜೆಗಳನ್ನಿಟ್ಟವರು. ಬಳಿಕ ಕೇರಳ ಮೂಲದ ಶಾಜು ಎಂ. ಎಂ ಇವರಿಂದ ಕಠಿಣ ಅಭ್ಯಾಸಗಳನ್ನು ನಡೆಸಿ, ನಂತರ ಕರಾಟೆ ಶಿಕ್ಷಕರಾಗಿ ದುಡಿಯುತ್ತಾ ಸುಮಾರು ಇಪ್ಪತ್ತೊಂದು ವರ್ಷಗಳ ಸತತ ಅಭ್ಯಾಸದೊಂದಿಗೆ ಇದೀಗ 4ನೇ ಡ್ಯಾನ್ ಬ್ಲ್ಯಾಕ್ ಬೆಲ್ಟ್ ಪದವಿಯಲ್ಲಿ ಉತ್ತೀರ್ಣಗೊಂಡವರು. ಸಾಧನೆಯ ತುಡಿತವಿದ್ದರೆ ಯಾವುದೂ ಅಡ್ಡಿಯಿಲ್ಲ ಎನ್ನುವಂತೆ ಬಡತನದ ಬದುಕಿನಲ್ಲೇ ಕರಾಟೆ ಕಲೆಯನ್ನು ಬೆಳೆಸಿಕೊಂಡು ಅಪರಿಮಿತ ಆಸಕ್ತಿ ಮತ್ತು ಪ್ರಯತ್ನದಿಂದ ಸಾಧನಾಶೀಲರಾಗಿ, ಹಿರಿಯ ಅನುಭವಿ ಕರಾಟೆ ಶಿಕ್ಷಕರಾಗಿ ಜನ ಮೆಚ್ಚುಗೆ ಪಡೆದವರು.
16 ವರ್ಷಗಳಿಂದ ಇನ್‍ಸ್ಟಿಟ್ಯೂಟ್ ಆಫ್ ಆರ್.ವಿ.ಟೈಗರ್ ಮಾರ್ಷಲ್ ಆಟ್ರ್ಸ್(ರಿ) ಮಂಗಳೂರು ಎಂಬ ಸಂಸ್ಥೆಯನ್ನು ನಡೆಸುತ್ತಿರುವ ಇವರ ಗರಡಿಯಲ್ಲಿ ಅಪಾರ ಸಂಖ್ಯೆಯಲ್ಲಿ ಶಿಷ್ಯವರ್ಗ ಕರಾಟೆ ಕಲಿಯುತ್ತಿದೆ. ಅನೇಕ ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿರುವ ಇವರು ಹಲವು ಕಡೆಗಳಲ್ಲಿ ತರಬೇತಿ ಕೇಂದ್ರಗಳನ್ನು ತನ್ನ ಸಂಸ್ಥೆಯ ಮೂಲಕ ಸ್ಥಾಪಿಸಿದ್ದು 1300 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ತನ್ನ ಕಲೆಯನ್ನು ಧಾರೆ ಎರೆದಿದ್ದಾರೆ. ತನ್ನ ಕೇಂದ್ರಗಳ ಶಿಬಿರಾರ್ಥಿಗಳಲ್ಲಿ ಕೆಲವರು ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೇಯಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ. ಇನ್ನಷ್ಟು ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಕರಾಟೆ ಕಲೆಯನ್ನು ಉಳಿಸಿ ಬೆಳೆಸುವ ಉತ್ಸಾಹದಲ್ಲಿರುವ ಇವರು ಹ¯ವಾರು ಕಡೆ ಸಂಘ ಸಂಸ್ಥೆಗಳಲ್ಲಿ, ವಿದ್ಯಾರ್ಥಿನಿ ನಿಲಯ ಹಾಗೂ ಶಾಲಾ ಕಾಲೇಜುಗಳಲ್ಲಿ ತರಬೇತಿ ನೀಡುತ್ತಾ ಕರಾಟೆ ಕ್ಷೇತ್ರಕ್ಕೆ ವಿಶಿಷ್ಠ ಸೇವೆ ಸಲ್ಲಿಸುತ್ತಿದ್ದಾರೆ.
ಇನ್‍ಸ್ಟಿಟ್ಯೂಟ್ ಆಫ್.ಆರ್.ವಿ.ಟೈಗರ್ ಮಾರ್ಷಲ್ ಆಟ್ರ್ಸ್ ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯ ಶಿಕ್ಷಕರಾಗಿರುವ ಸೆನ್ಸಾಯಿ ವಸಂತ.ಕೆ.ಬಂಗೇರರು ಇಂಟರ್‍ನ್ಯಾಷನಲ್ ಶೋರಿನ್ ರ್ಯೂ ಕರಾಟೆ ಆ್ಯಂಡ್ ಕುಬುಡೊ ಎಂಬ ಅಂತಾರಾಷ್ಟ್ರೀಯ ಖ್ಯಾತಿಯ ಕರಾಟೆ ಶೈಲಿಯಲ್ಲಿ 6ನೇ ಡ್ಯಾನ್ ಪಡೆದಿರುವ ಕೇರಳ ಮೂಲದ ಸಿಹಾನ್ ಜೋಸೆಫ್ ಜಾನ್ ಇವರಿಂದ ತರಬೇತಿ ಪಡೆದು 4ನೇ ಡ್ಯಾನ್ ಬ್ಲ್ಯಾಕ್‍ಬೆಲ್ಟ್ ಹಾಗೂ ಪ್ರಮಾಣ ಪತ್ರ ಪಡೆದಿದ್ದು ಪ್ರಸ್ತುತ ಕರಾಟೆಯಲ್ಲಿರುವ ಕುಟುಡೋ ಆಯುಧ ಅಭ್ಯಾಸಗಳ ತರಬೇತಿಗಾಗಿ ಈಗಾಗಲೇ ನಝಕ್ ಕಾಮ, ಸೋಡ್‍ಸ್ಟೀಕ್ ಮುಂತಾದ ಕಷ್ಟಕರ ಆಯುಧಾಭ್ಯಾಸಗಳಲ್ಲಿ ತೊಡಗಿಸಿಕೊಂಡಿರುವುದು ಇವರ ಆಸಕ್ತಿ ಮತ್ತು ಅಪ್ರತಿಮ ಕಲಿಕಾ ಛಲಕ್ಕೆ ಸಾಕ್ಷಿಯಾಗಿದೆ.
ಪತ್ನಿ ಬಿ.ಕೆ.ರೇಖಾ, ಪುತ್ರ ಶೋಭಿತ್.ವಿ.ಆರ್ ಬಂಗೇರ ಹಾಗೂ ಪುತ್ರಿ ಶೋನಿಕಾ.ವಿ.ಆರ್ ಬಂಗೇರರ ಚಿಕ್ಕ ಸಂಸಾರದೊಂದಿಗೆ ಮಡಂತ್ಯಾರು ಪಾರೆಂಕಿಯಲ್ಲಿ ವಾಸ್ತವ್ಯ ಹೊಂದಿರುವ ಬಂಗೇರಾರವರಿಗೆ ತಾನು ಕಲಿತ ವಿದ್ಯೆಯ ಮೂಲಕ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂಬ ತುಡಿತವಿದೆ. ಇನ್ನಷ್ಟು ಸಹಕಾರ, ಪ್ರೋತ್ಸಾಹ ದೊರೆತರೆ ಕರಾಟೆ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯುವ ಎಲ್ಲಾ ರೀತಿಯ ಗುಣಗಳಿದೆ. ಬಂಗೇರಾ ಅವರ ಬದುಕು ಬಂಗಾರವಾಗಲಿ, ಭವಿಷ್ಯ ಉಜ್ವಲವಾಗಲಿ ಎಂಬ ಶುಭ ಹಾರೈಕೆ ನಮ್ಮದು.
ಎಲ್ಲರ ಸಹಕಾರ ಬೇಕು:
ನಾನು ಕರಾಟೆಯನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ಮುದೊಂದು ದಿನ ಪವರ್ ಮಾಸ್ಟರ್ ಆಗಬೇಕು ಎನ್ನುವ ಬಯಕೆಯೂ ಇದೆ. ಆತ್ಮರಕ್ಷಣೆಯ ಕಲೆಗಳಲ್ಲಿ ಒಂದಾದ ಕರಾಟೆಯ ಬೆಳವಣಿಗೆಗೆ ಇನ್ನಷ್ಟು ಸಹಕಾರದ ಅಗತ್ಯವಿದೆ. ಭಾರತದ ಮೂಲೆ ಮೂಲೆಗಳಲ್ಲಿ ಸಾವಿರಾರು ಉತ್ಸಾಹಿಗಳಿದ್ದಾರೆ. ಯುವ ಪ್ರತಿಭೆಗಳಿದ್ದಾರೆ. ಆದರೆ ಈ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸದ ಹಿನ್ನಲೆಯಲ್ಲಿ ಅದೆಷ್ಟೋ ಕರಾಟೆ ಪಟುಗಳು ಸಾಧನೆಯ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಎಳೆಮರೆಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ, ಸಹಕಾರ ನೀಡಿದರೆ ಉತ್ತಮ ಕರಾಟೆಪಟುವಾಗಿ ಮೂಡಿ ಬರಲು ಸಾದ್ಯವಿದೆ ಎನ್ನುತ್ತಾರೆ ಸೆನ್ಸಾಯಿ ವಸಂತ ಕೆ.ಬಂಗೇರ ಅವರು.
ಗೋಪಾಲ ಅಂಚನ್

By suddi9

Leave a Reply

Your email address will not be published. Required fields are marked *