ಮುಖದಲ್ಲಿ ಸದಾ ಮಂದಹಾಸ, ಓಡಾಟದಲ್ಲಿ ಎಂದಿಗೂ ಬತ್ತದ ಉತ್ಸಾಹ, ದೃಡಕಾಯದ ಬದ್ಧತೆಯ ವ್ಯಕ್ತಿತ್ವ, ಕಾಯಕದಲ್ಲಿ ಕ್ರಿಯಾಶೀಲತೆ, ಬಹುಮುಖಿ ಆಸಕ್ತಿ, ಮಾಧ್ಯಮವೇ ಉಸಿರು….ಹೀಗೆ ಹತ್ತಾರು ವಿಶೇಷ ಗುಣಗಳ ಸಂಪನ್ನರಾದ ರೋನ್ಸ್ ಬಂಟ್ವಾಳ್ ಅವರಿಗೆ ಸಹಜವಾಗಿಯೇ ಈ ಬಾರಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ. ಈ ಮೂಲಕ ಈ ಪ್ರಶಸ್ತಿಗೆ ಪಾತ್ರರಾದ ಪ್ರಥಮ ಹೊರನಾಡ ಕನ್ನಡಿಗರು ಎಂಬ ಹೆಗ್ಗಳಿಕೆಯೂ ರೋನ್ಸ್ ಅವರಿಗೆ ಪ್ರಾಪ್ತವಾಗಿದೆ.
Rons Bantwal-A (2)
ಎಲ್ಲಕ್ಕಿಂತಲೂ ಮಿಗಿಲಾಗಿ ರೋನ್ಸ್ ನಮ್ಮವರು, ನಮ್ಮ ಬಂಟ್ವಾಳದವರು, ಬಂಟ್ವಾಳದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಬಾಲ್ಯದ ಸವಿಯನ್ನು ಕಂಡು ಎತ್ತರೆತ್ತರ ಬೆಳೆದವರು ಎಂಬ ಹೆಮ್ಮೆಯೂ ನಮಗಿದೆ. ಪ್ರಶಸ್ತಿ ಪುರಸ್ಕ್ರತ ರೋನ್ಸ್ ಅವರನ್ನು ಬಂಟ್ವಾಳದ ಕಾರ್ಯನಿರತ ಪತ್ರಕರ್ತರ ಸಂಘವು ಅಭಿನಂದಿಸಿರುವುದು ಅರ್ಥಪೂರ್ಣವಾಗಿದ್ದು ಇದು ಬಂಟ್ವಾಳದ ಸಮಸ್ತ ಜನತೆಯ ಪರವಾಗಿ ರೋನ್ಸ್ ಅವರಿಗೆ ಸಂದ ಗೌರವವೆಂದರೂ ತಪ್ಪಲ್ಲ.
ರೋನ್ಸ್ ಬಂಟ್ವಾಳ ಅವರ ಮಾಧ್ಯಮ ಬದುಕಿನ ಪಯಣವೇನೂ ಹೂವಿನ ಹಾಸಿಗೆಯಲ್ಲ. ಮುಂಬೈಯಲ್ಲಿ ನೆಲೆನಿಂತು ಅಲ್ಲಿನ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿ ಅಲ್ಲಿನ ನಿತ್ಯದ ಸುದ್ದಿಗಳನ್ನು ಕರ್ನಾಟಕದ ಹಲವು ಮಾಧ್ಯಮಗಳಿಗೆ ಕ್ಲಪ್ತ ಸಮಯಕ್ಕೆ ತಲುಪಿಸಿ ಕರ್ನಾಟಕ ಮಾಧ್ಯಮ ರಂಗ ಹಾಗೂ ಓದುಗ ವಲಯದ ಮೆಚ್ಚುಗೆಯನ್ನು ಪಡೆಯುವುದೆಂದರೆ ಅದೇನೂ ಸುಲಭದ ಮಾತಲ್ಲ. ಆದರೆ ಇಂತಹ ಸಾಹಸದಲ್ಲೂ ಯಶಸ್ವಿಯಾಗಲು ಕಾರಣ ರೋನ್ಸ್‍ಗೆ ಬದುಕಿನ ಮೇಲಿರುವ ಬದ್ಧತೆ, ಎಲ್ಲರೊಳಗೊಂದಾಗುವ ಮಾನವೀಯತೆ, ಕರ್ತವ್ಯದ ಮೇಲಿರುವ ದಕ್ಷತೆ ಎಂದರೂ ತಪ್ಪಲ್ಲ.
ದಕ್ಷಿಣ ಕನ್ನಡದ ಬಂಟ್ವಾಳದ ಬಿ.ಸಿ.ರೋಡು ಪರಿಸರದಲ್ಲಿ 1970 ರಲ್ಲಿ ಜನಿಸಿದ ರೋನ್ಸ್, ಬಾಲ್ಯದ ಶಿಕ್ಷಣವನ್ನೆಲ್ಲಾ ಮುಗಿಸಿದ್ದು ಬಂಟ್ವಾಳ ಪರಿಸರದಲ್ಲೇ. ವಿದ್ಯಾರ್ಥಿದೆಸೆಯಿಂದಲೇ ನಾಯಕತ್ವದ ಗುಣವನ್ನು ಹೊಂದಿ ಹಲವು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ರೋನ್ಸ್ ಸಿವಿಲ್ ಇಂಜಿನಿಯರಿಂಗ್ ಪದವಿಗಳಿಸಿದರೂ ಆರಂಭದಲ್ಲಿ ಆಸಕ್ತಿ ಬೆಳೆಸಿದ್ದು ಮಾತ್ರ ರಾಜಕೀಯ ವಲಯದತ್ತ. ಜನಸೇವೆಯ ಹಂಬಲಹೊತ್ತ ಅವರು ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಿ ವಿಧಾನಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೂ ಆಗಿನ ರಾಜಕೀಯದಾಟದಲ್ಲಿ ಟಿಕೆಟ್ ದೊರೆಯಲಿಲ್ಲ. ನಂತರ ಉದ್ಯೋಗ ಅರಸುತ್ತಾ ಬರೋಡಾ, ವಿರಾರ್, ರತ್ನಾಗಿರಿ…ಹೀಗೆ ಸುತ್ತಾಡಿ ಮುಂಬೈನಗರಕ್ಕೆ ಆಪ್ತರಾದರು, ನೌಕರಿಯನ್ನೂ ಪಡೆದರು. ಆದರೆ ಕೇವಲ ನೌಕರಿ, ಸಂಬಳ ಇವಿಷ್ಟಕ್ಕೆ ತೃಪ್ತರಾಗುವ ಮನುಷ್ಯ ಇವರಲ್ಲ. ಸಮಾಜಕ್ಕೆ ತಾನೇನಾದರೂ ಕೊಡಬೇಕು, ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ತನ್ನದೂ ಕಿಂಚಿತ್ತಾದರೂ ಪಾಲು ಇರಬೇಕು ಎನ್ನುವ ಮನಸ್ಸಿನ ತುಡಿತದೊಂದಿಗೆ ಚಿಗುರೊಡೆದದ್ದೇ ಇವರ ಮಾಧ್ಯಮ ಬದುಕಿನ ಪಯಣ..
ಮಂಗಳೂರಿನ ಪ್ರಸಿದ್ಧ ಕೊಂಕಣಿ ಪತ್ರಿಕೆ ರಾಕ್ಣೋಗೆ ಚಂದಾ ಕೂಡಿಸುವ ಕೆಲಸದ ಸಮರ್ಥ ನಿರ್ವಹಣೆ, 1996 ರಲ್ಲಿ ಜನವಾಹಿನಿ ದೈನಿಕಪತ್ರಿಕೆಗೆ ಮುಂಬಯಿ ವಿಭಾಗದ ಮುಖ್ಯಸ್ಠರಾಗಿ ನೇಮಕ-ಛಾಯಾಚಿತ್ರಗಾರನಾಗಿ ಮತ್ತು ವರದಿಗಾರನಾಗಿ ದುಡಿಮೆ, ನಂತರ ಉದಯವಾಣಿ ಪತ್ರಿಕೆಗೆ ಪೂರ್ಣಾವಧಿ ಪತ್ರಕರ್ತನಾಗಿ ತರಂಗ,ರೂಪತಾರ,ಮಣಿಪಾಲ್ ಮೀಡಿಯಾದಲ್ಲಿ ಬಹುಕಾಲ ಶ್ರಮದಾಯಕ ಸೇವೆ, ಇದೇ ವೇಳೆ ಕರ್ನಾಟಕ ಮಲ್ಲ ಪತ್ರಿಕೆಯ ಹಿರಿಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿಯವರ ಮಾರ್ಗದರ್ಶನದೊಂದಿಗೆ ಮುಂಬೈಯಲ್ಲಿ ಕನ್ನಡ ಪತ್ರಕರ್ತರ ಸಂಘಟನೆ, ಅಬುದಾಬಿ-ಕುವೈಟ್- ಶಾರ್ಜ-ಮಲೇಶಿಯ-ಬ್ಯಾಂಕಾಕ್ ಮೊದಲಾದ ಹಲವು ರಾಷ್ಟ್ರಗಳಲ್ಲಿ ನಡೆದ ಮಹತ್ವದ ಕಾರ್ಯಕ್ರಮಗಳನ್ನು ಕ್ರಮವಾಗಿ ವರದಿ ಮಾಡಿ ಜನಮೆಚ್ಚುಗೆ, ಪ್ರಸ್ತುತ ವಿಜಯ ಕರ್ನಾಟಕ ದೈನಿಕಕ್ಕೆ ಮುಂಬಯಿ ಪ್ರತಿನಿಧಿಯಾಗಿ-ಡೈಜಿ ವರ್ಲ್ಡ್ ಮುಂಬಯಿ ಬ್ಯೂರೊ ಮುಖ್ಯಸ್ಥರಾಗಿ ಕೆಲಸದ ಜತೆಯಲ್ಲಿ ಕರ್ನಾಟಕದ ಸುಮಾರು 20ಕ್ಕೂ ಮಿಗಿಲಾದ ಪತ್ರಿಕೆಗಳಿಗೆ ಸುದ್ದಿ ಮತ್ತು ಚಿತ್ರಗಳ ಪೂರೈಕೆ….ಇದು ರೋನ್ಸ್ ಅವರ ಮಾಧ್ಯಮ ರಂಗದ ಸಾಧನೆಯ ಹಾದಿಯ ಕೆಲವು ಹೆಜ್ಜೆಗಳಷ್ಟೇ.
ರೊನಿಡ ಪ್ರೆಸ್ ಮೀಡಿಯ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿ, ಮಹಾರಾಷ್ಟ್ರ ಕನ್ನಡ ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿಯಾಗಿರುವ ರೋನ್ಸ್ ಸಂಘಟನೆ, ಸಮಾಜ ಸೇವೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಸಹಾಯ ಮನೋಭಾವನೆ, ಸ್ನೇಹಶೀಲತೆಯಲ್ಲೂ ಎತ್ತಿದ ಕೈ. ಇತ್ತೀಚೆಗೆ ಮುಂಬಯಿನಲ್ಲಿ ಅಖಿಲ ಭಾರತೀಯ ಕನ್ನಡ ಪತ್ರಕರ್ತರ ಸಮಾವೇಶವನ್ನು ಸಂಘಟಿಸಿದ ರೀತಿ ನಿಜಕ್ಕೂ ಅದ್ಭುತ. ಹೊರನಾಡಿನಲ್ಲಿ ಪತ್ರಕರ್ತರ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ ಹಲವಾರು ಶಿಬಿರಗಳ ಆಯೋಜನೆ, ಖಾಸಗಿ ಬಸ್‍ಗಳ ದರ ಏರಿಕೆ ವಿರುದ್ಧ ಹೋರಾಟ, ಕೊಂಕಣ ರೈಲ್ವೆ ಪ್ರಯಾಣಿಕರ ಸಮಸ್ಯೆಗೆ ಪರಿಹಾರ, ವೇಶ್ಯಾವಾಟಿಕೆಗೆ ಬಲಿಯಾಗುವ ಮಹಿಳೆಯರ ರಕ್ಷಣೆ, ಅನಾರೋಗ್ಯ ಪೀಡಿತರಿಗೆ ನೆರವು ಮೊದಲಾದವುಗಳು ರೋನ್ಸ್ ಅವರ ಸಾಮಾಜಿಕ ಕಾಳಜಿಯನ್ನು ಪ್ರತಿಬಿಂಬಿಸುವ ಕೆಲವು ನಿದರ್ಶನಗಳು.
ಪತ್ರಕಾರ್ ರತ್ನ ಪ್ರಶಸ್ತಿ, ಇಂಟರ್ ನ್ಯಾಷನಲ್ ಪರ್ಸನ್ ಆಫ್‍ದ ಲ್ಯುಮಿನರಿ ಪ್ರಶಸ್ತಿ, ಸ್ವರ್ಣ ಪದಕ ಪ್ರಶಸ್ತಿ, ಪರಿವರ್ತನ್ ಪ್ರತಿಷ್ಠಾನ್ ಪುರಸ್ಕಾರ್, ಸಾಧಕ ಜರ್ನಲಿಸ್ಟ್, ಸ್ವಸ್ತಿಕ್ ಸಂಭ್ರಮ ಪುರಸ್ಕಾರ, ಡಿವೊ ಸಾಹಿತ್ಯ ಪುರಸ್ಕಾರ್ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ರೋನ್ಸ್ ಭಾಜನರಾದವರು. ಇವೆಲ್ಲಕ್ಕಿಂತಲೂ ಮಿಗಿಲಾಗಿ ಒಬ್ಬ ಪತ್ರಕರ್ತರಾಗಿ ಎಲ್ಲಾ ಜಾತಿ, ಮತ, ಧರ್ಮ, ಭಾಷೆಗಳ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾದವರು. ರೋನ್ಸ್ ಇನ್ನಷ್ಟು ಎತ್ತರೆತ್ತರ, ವಿಶಾಲವಾಗಿ ಬೆಳಯಲಿ. ಅದರೊಂದಿಗೆ ಬಂಟ್ವಾಳದ ಹೆಸರೂ ರಾರಾಜಿಸಲಿ ಎಂದು ನಮ್ಮ ಬಂಟ್ವಾಳ ಮೀಡಿಯ ಗ್ರೂಫ್ ಹೃದಯಪೂರ್ವಕ ಹಾರೈಸುತ್ತಾ ರೋನ್ಸ್ ಅವರಿಗೆ ಸಲ್ಲಿಸುತ್ತದೆ ಸಹಸ್ರ ಸಹಸ್ರ ವಂದನೆ-ಅಭಿನಂದನೆ.

ಗೋಪಾಲ ಅಂಚನ್

By suddi9

Leave a Reply

Your email address will not be published. Required fields are marked *