ಬಂಟ್ವಾಳ : ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಎಲ್ಲರೂ ಪ್ರತಿಪಾದಿಸುತ್ತಾರೆ. ಆಧುನಿಕ ಯುಗದಲ್ಲಿ ಕೃಷಿಯನ್ನು ಬಿಟ್ಟು ಉದ್ಯೋಗಕ್ಕಾಗಿ ವಲಸೆ ಹೋಗುವವರೇ ಜಾಸ್ತಿ. ಆದರೆ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ವಿದೇಶಿ ಉದ್ಯೋಗವನ್ನು ಬಿಟ್ಟು ಕೃಷಿಯ ಗುಂಗಿನಲ್ಲಿ ಹಳ್ಳಿಗೆ ಬಂದು ಕೃಷಿಯಲ್ಲಿ ಅದರಲ್ಲೂ ಮಣ್ಣುರಹಿತ ಕೃಷಿ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.
ಪುಂಜಾಲಕಟ್ಟೆಯ ಕಟ್ಟೆಮನೆಯ ಸೂರಜ್ ಈ ಉತ್ಸಾಹಿ ತರುಣ. ಅವರ ಸೋದರ ಮಾವಂದಿರಾದ ಮೂಲತಃ ಪ್ರಗತಿಪರ ಕೃಷಿಕರಾದ ಕಟ್ಟೆಮನೆ ಸಹೋದರರೆಂದು ಖ್ಯಾತಿ ಪಡೆದ ಉದಯಕುಮಾರ್ ಮತ್ತು ಸಹೋದರರಿಂದ ಕೃಷಿಯ ಆಕರ್ಷಣೆಗೊಳಗಾಗಿ ಊರಿನಲ್ಲಿ ನೆಲೆಯೂರಿದ್ದಾರೆ. ಪ್ರಸ್ತುತ ಅವರು ಕೃಷಿಗೆ ಬಳಸಿಕೊಂಡ ವಿಧಾನವೇ ಹೈಡ್ರೋಪೋನಿಕ್ಸ್ ವಿಧಾನ.
4

2

3

6

7 (1)
ಏನಿದು ಹೈಡ್ರೋಪೋನಿಕ್ಸ್ ವಿಧಾನ ? ನಗರದಲ್ಲಿ ತಾರಸಿಯಲ್ಲಿ ಸ್ವಲ್ಪ ಹೆಚ್ಚಿನ ಜಾಗ ಪಡೆಯಬೇಕಿದ್ದರೆ ದುಬಾರಿ ವೆಚ್ಚ ತಗಲುತ್ತದೆ. ಆಗ ಇಂಥ ಜಾಗದಲ್ಲಿ ಪ್ರತಿಯೊಂದು ಇಂಚನ್ನೂ ಸದುಪಯೋಗ ಪಡಿಸುವ ಅಗತ್ಯ ಹೆಚ್ಚಿರುತ್ತದೆ. ನಗರದಲ್ಲಿ ಕೃಷಿ ಮಾಡಬಯಸುವ, ನೀರು, ಜಾಗ ಮತ್ತು ಸಮಯದ ಅಭಾವ ಇರುವ ಉತ್ಸಾಹಿಗಳಿಗೆ ಹೈಡ್ರೋಪೋನಿಕ್ಸ್ ಒಂದು ಉತ್ತಮ ವಿಧಾನ. ಮಣ್ಣುರಹಿತ ಕೃಷಿಯ ಹಲವು ವಿಧಾನಗಳಲ್ಲಿ ಏರೋಪೋನಿಕ್ಸ್ ಗಿಂತ ಹೈಡ್ರೋಪೋನಿಕ್ಸ್ ಕಡಿಮೆ ವೆಚ್ಚದಾಯಕ.
ತಮ್ಮ ಕುಟುಂಬದ ಮನೆಯಲ್ಲಿ ಸೂರಜ್ ಅವರು ಈ ಪ್ರಯೋಗ ಕೈಗೊಂಡು ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಅವರು ಅಂತರ್ಜಲದ ಮಾಹಿತಿ ಪಡೆದುಕೊಂಡಿದ್ದಾರೆ. ಈ ವಿಧಾನ ಸ್ವಯಂಚಾಲಿತ ಆಗಿರುವುದು ಮಾತ್ರವಲ್ಲ . ಜಾಗ, ಸಮಯ ಮತ್ತು ನೀರಿನ ಉಳಿತಾಯ ಸಾಸಿ, ಯಾವುದೇ ರಾಸಾಯನಿಕ ಬಳಸದೆ ಬೆಳೆ ತೆಗೆಯಲಾಗುತ್ತಿದೆ. ಇದು ಸರಕಾರದ ಮೋರ್ ಕ್ರಾಪ್ ಪರ್ ಡ್ರಾಪ್ ತತ್ವಕ್ಕೆ ಅನುಗುಣವಾಗಿಯೂ ಇದೆ. ಇದಕ್ಕೆ ಬೇಕಾಗಿರುವುದು ಪೈಪ್ ಫಿಟ್ಟಿಂಗ್ಗಳು, ಡಿಜಿಟಲ್ ಮೀಟರ್, ರೀ ಸರ್ವಯರ್, ಟೈಮರ್ ಮೊದಲಾದ ಪರಿಕರಗಳು. ಫೈಬರ್ ಬಕೆಟ್ಗಳಲ್ಲಿ ಕೊಕೊ ಸಿಪ್ಪೆ ಮಿಶ್ರಣ ಬಳಸಿ ರಾಸಾಯನಿಕ ಪೋಷಕಾಂಶ ದ್ರಾವಣ ಸೇರಿಸಿ ಗಿಡವನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಅವುಗಳನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ತುಂಬಿಸಿ ಪೈಪ್ ಫಿಟ್ಟಿಂಗ್ಗಳಲ್ಲಿ ಅಳವಡಿಸಲಾಗುತ್ತದೆ. ಸ್ವಂಚಾಲಿತ ವಿಧಾನದಿಂದ ಪೋಷಕಾಂಶ ಹೊಂದಿದ ತುಂತುರು ಹನಿ ನೀರುಣಿಸಲಾಗುತ್ತದೆ. ಹಣದ ದೃಷ್ಟಿಯಿಂದ ದುಬಾರಿ. ಆದರೆ ಅದು ಉಳಿಸಿಕೊಡುವ ಸಮಯ, ನೀರು ಮತ್ತು ಜಾಗ ಗಮನಿಸಿದರೆ ಅದು ವೆಚ್ಚಕ್ಕೆ ತಕ್ಕ ಪ್ರತಿಫಲ ಕೊಡುತ್ತದೆ ಎಂದು ಸೂರಜ್ ಅವರು ಅಭಿಪ್ರಾಯ ಪಡುತ್ತಾರೆ. ಅವರ ಡಿಎಫ್ಟಿ/ಎನ್ಎಫ್ಟಿ ಹೈಡ್ರೋಪೋನಿಕ್ಸ್ ವ್ಯವಸ್ಥೆಯಲ್ಲಿ 40 ಚದರ ಅಡಿ ಜಾಗದಲ್ಲಿ 48 ಗಿಡ ಬೆಳೆಸಲಾಗಿದೆ.

ಪ್ರಯೋಜನಗಳು : ಈ ವಿಧಾನದಿಂದ ಕೃಷಿಯ ಅನುಭವವಿಲ್ಲದವರೂ ಕೃಷಿ ಮಾಡಿ ಅನುಭವಿ ಕೃಷಿಕರಷ್ಟೇ ಉತ್ಪಾದನೆ ಪಡೆಯಬಹುದು. ಐವತ್ತು ಗಿಡಗಳಿಗೆ ಎರಡು ವಾರಕ್ಕೆ ಒಟ್ಟು 150 ಲೀಟರ್ ನೀರು ಸಾಕಾಗುತ್ತದೆ. ಗಿಡಗಳಿಗೆ ಗೊಬ್ಬರ ಮತ್ತು ದಿನಕ್ಕೆರಡು ಬಾರಿ ನೀರುಣಿಸುವ ಶ್ರಮವಿಲ್ಲ. ಗಿಡಗಳು ಮಣ್ಣಿನಲ್ಲಿ ಬೆಳೆಯುವುದಕ್ಕಿಂತ ಎರಡುಪಟ್ಟು ವೇಗವಾಗಿ ಇದರಲ್ಲಿ ಬೆಳೆಯುತ್ತದೆ.
ರಸಗೊಬ್ಬರ ಮತ್ತು ಪ್ರಯೋಗ ಶಾಲೆಯ ಗುಣಮಟ್ಟದ ಕೆಲವು ರಾಸಾಯನಿಕ ಸೇರಿಸಿ ಪೋಷಕಾಂಶ ದ್ರಾವಣ ತಯಾರಿಸಿಕೊಳ್ಳಲಾಗುತ್ತದೆ. ಇದು ವಿವಿಧ ಬೆಳೆಗಳಿಗೆ ವಿಭಿನ್ನವಾಗಿರುತ್ತದೆ. ಅರಿಝೋನಾ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರ ಮಾರ್ಗದರ್ಶನದಲ್ಲಿ ಈ ದ್ರಾವಣ ಸಿದ್ಧಪಡಿಸಲಾಗುತ್ತಿದೆ.
ಸೂರಜ್ ಅವರು ಈವರೆಗೆ ಹೈಡ್ರೋಪೋನಿಕ್ಸ್ ಮೂಲಕ ಮುಳ್ಳುಸೌತೆ, ಚೆರ್ರಿ ಟೊಮೆಟೋ, ದೊಣ್ಣೆಮೆಣಸು, ಅಲಸಂಡೆ, ಪಾಲಕ್, ಕೊತ್ತಂಬರಿ, ಸಾಸಿವೆ, ತುಳಸಿ ಮೊದಲಾದವಲ್ಲದೆ ಹೂಗಿಡಗಳನ್ನೂ ಯಶಸ್ವಿಯಾಗಿ ಬೆಳೆಸಿದ್ದಾರೆ. ಗಿಡಗಳಿಗೆ ಕೀಟಬಾಧೆ ಮತ್ತು ರೋಗಗಳು ಬಾಸಬಹುದಾದರೂ ಮಣ್ಣಿನ ರೋಗಗಳು ಇಲ್ಲಿ ದೂರ.
ಅವರ ಅನುಭವ ಪ್ರಕಾರ ಹೈಬ್ರಿಡ್ ಚೆರ್ರಿ , ಟೊಮೊಟೋ ಬೆಳೆಯುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದರೂ ವಾಣಿಜ್ಯ ಮಟ್ಟದ ಕೃಷಿಗೆ ದಕ್ಷಿಣ ಕನ್ನಡದ ಅತಿ ಮಳೆ ಮತ್ತಿತರ ಹವಾಮಾನದ ಸವಾಲುಗಳನ್ನೆದುರಿಸಲು ಪಾಲಿಹೌಸ್ ಬೇಕೇ ಬೇಕೆನ್ನುತ್ತಾರೆ.
ಹೈಡ್ರೋಪೋನಿಕ್ಸ್ಗೆ ಕೆಲವು ಇತಿಮಿತಿಗಳೂ ಇವೆ. ಅಲ್ಪಾವಯ ಚಿಕ್ಕ ಗಿಡಗಳನ್ನಷ್ಟೇ ಬೆಳೆಯಬಹುದು. ಬೆಳ್ಳುಳ್ಳಿ , ಬಟಾಟೆಯಂತಹ ಗಡ್ಡೆ ಬೆಳೆ ಬೆಳೆಸುವ ಪ್ರಯೋಗದಲ್ಲಿ ಅವರು ತೊಡಗಿದ್ದಾರೆ. ಇದರಲ್ಲಿ ಸಾವಯವ ಮತ್ತು ರಾಸಾಯನಿಕದ ಬಗ್ಗೆ ವಿಮರ್ಶೆಯಿದ್ದರೂ ಮಣ್ಣಿನಲ್ಲಿ ರಾಸಾಯನಿಕ ಬಳಸುವುದರಿಂದ ಮಣ್ಣಿನ ಫಲವಂತಿಕೆ ನಾಶವಾಗುವ ತೊಂದರೆ ಇದರಲ್ಲಿ ಇಲ್ಲ ಎಂದು ಸೂರಜ್ ಹೇಳುತ್ತಾರೆ.
ರಾಜ್ಯಾದ್ಯಂತ ನೀರಿನ ಸಮಸ್ಯೆ ಕಾಡುವ ಪ್ರಸ್ತುತ ದಿನಗಳಲ್ಲಿ ನೀರಿನ ಬಗ್ಗೆ ಎಚ್ಚರಿಕೆ ಅಗತ್ಯ . ಹಾಗಾಗಿ ನೀರಿನ ಪ್ರತಿಯೊಂದು ಬಿಂದೂ ಉತ್ಪಾದಕ ಆಗುವಂತೆ ನೋಡಿಕೊಳ್ಳಬೇಕಿದೆ. ಈ ಚಿಂತನೆಯಿಂದ ಕೆಲವೇ ಮಂದಿ ಮಾತ್ರ ದೇಶದ ಬೆಂಗಳೂರು, ಪುಣೆ ಮೊದಲಾದೆಡೆ ಹೈಡ್ರೋಪೋನಿಕ್ಸ್ ಕೃಷಿ ಮಾಡುತ್ತಿದ್ದಾರೆ. ದುರದೃಷ್ಟವಶಾತ್ ಹೈಡ್ರೋಪೋನಿಕ್ಸ್ ಬಗ್ಗೆ ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಅಷ್ಟು ಗಮನ ಹರಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನಹರಿಸಬೇಕಾಗಿದೆ.

ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಸೂರಜ್ ಅವರು ಉದ್ಯೋಗ ನಿಮಿತ್ತ ವಿವಿಧ ದೇಶಗಳಿಗೆ ತೆರಳುತ್ತಿದ್ದರು. ಅಮೆರಿಕಾ, ಕೆನಡಾ, ಸಿಂಗಾಪುರಗಳಲ್ಲಿ ಮನೆಯ ತಾರಸಿಯಲ್ಲಿ ತರಕಾರಿ ಬೆಳೆಯುತ್ತಿರುವುದನ್ನು ಅವರು ನೋಡಿದ್ದರು. ಪ್ರತಿಕೂಲ ಹವಾಮಾನದಲ್ಲಿ ಬಿಡುವಿಲ್ಲದ ಜೀವನದ ನಡುವೆಯೂ ಹೈಡ್ರೋಪೋನಿಕ್ಸ್ ವಿಧಾನದಿಂದ ಉತ್ತಮ ಫಸಲು ಪಡೆಯುವುದನ್ನು ನೋಡುತ್ತಿದ್ದರು. ಎರಡು ವರ್ಷದ ಹಿಂದೆ ಮಾವಂದಿರ ಕೃಷಿಗೆ ಸಹಾಯ ಮಾಡಲು ಹಳ್ಳಿಗೆ ಬಂದು ನೆಲೆನಿಂತಾಗ ಹೈಡ್ರೋಪೋನಿಕ್ಸ್ ವಿಧಾನದ ಕೃಷಿಗೆ ಮನ ಮಾಡಿದರು. ಅವರದು ಹದಿನೇಳು ಮಂದಿಯ ಕೂಡುಕುಟುಂಬ. ಕುಟುಂಬದಲ್ಲಿ ಹೆಚ್ಚಿನವರು ಉನ್ನತ ವ್ಯಾಸಂಗ ನಡೆಸಿ ಹುದ್ದೆಗಳಲ್ಲಿದ್ದರೂ ಈ ಕೃಷಿಯಿಂದ ಆಕರ್ಷಿತರಾಗಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪತ್ನಿ ಸೌಜನ್ಯ ಇವರಿಗೆ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಾರೆ.
ಸದ್ಯಕ್ಕೆ ತಮ್ಮ ಕುಟುಂಬಕ್ಕೆ ಬೇಕಾದಷ್ಟು ತರಕಾರಿ ಬೆಳೆಸುವುದು ಸೂರಜ್ ಅವರ ಉದ್ದೇಶ. ಜೊತೆಗೆ ತಾರಸಿ ಕೃಷಿಯ ಬಗ್ಗೆ ಆಸಕ್ತರಿಗೆ ತಮ್ಮ ಜಾಲತಾಣದ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ. ಆಸಕ್ತರು ಅವರನ್ನು ಮೊ. ಸಂ. 9886701956 ಮತ್ತು

mksuraj83@gmail.com ಹಾಗೂ   www.soillessgardener.com ದಲ್ಲಿ ಸಂಪ ಸಬಹುದು.

ಸ್ಮಾರ್ಟ್ ಟವರ್:

ಇದು ಕೇವಲ 5 ಚದರ ಅಡಿಯಲ್ಲಿ ತಯಾರಿಸಬಹುದಾಗಿದೆ. ಮಣ್ಣುರಹಿತ ತಂತ್ರಜ್ಞಾನದಲ್ಲಿ ಹೈಡ್ರೋಪೋನಿಕ್ ಮತ್ತು ಏರೋಪೋನಿಕ್ ರೀತಿಯನ್ನು ಆಧರಿಸಿದೆ. ಒಂದೇ ಟವರ್ನಲ್ಲಿ ಸುಮಾರು 30 ರೀತಿಯ ವಿವಿಧ ರೀತಿಯ ಔಷಯ ಸಸ್ಯಗಳು, ಗಿಡಮೂಲಿಕೆಗಳು, ಹೂವಿನ ಗಿಡಗಳನ್ನು ಬೆಳೆಸಬಹುದುದಾಗಿದೆ. ಸ್ಟ್ರಾಬೆರಿ ಬೆಳೆ ಹೆಚ್ಚು ಪರಿಣಾಮಕಾರಿಯಾಗಿದ್ದು ಇತರ ಬೆಳೆಗಳನ್ನೂ ಬೆಳೆಸಬಹುದಾಗಿದೆ.

ಚಿತ್ರ : ಕಿಶೋರ್ ಪೆರಾಜೆ

By suddi9

Leave a Reply

Your email address will not be published. Required fields are marked *