ಬಂಟ್ವಾಳ: ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಜನರ ಸಮಸ್ಯೆಗಳು ಬಗೆ ಹರಿದಿಲ್ಲ. ದೇಶದ ಜನತೆಯನ್ನು ಒಗ್ಗೂಡಿಸುವ ಬದಲು ಸ್ವಾರ್ಥದ ರಾಜಕೀಯಕ್ಕಾಗಿ ಜಾತಿ, ಮತ, ಮೇಲು ಕೀಳು ಎಂಬ ಭೇದ ಭಾವ ಮಾಡಲಾಗುತ್ತಿದೆ. ಎಲ್ಲಿ ಪ್ರೀತಿ ಮತ್ತು ಸೌಹಾರ್ದತೆ ಇರುತ್ತದೋ ಅಲ್ಲಿ ತನ್ನಿಂದ ತಾನೆ ಅಭಿವೃದ್ದಿ ಕೆಲಸಗಳು ನಡೆಯುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.
ಅವರು ಭಾನುವಾರ ಸಂಜೆ ತನ್ನ ಶಾಸಕ ನಿಧಿಯಲ್ಲಿ ಮಂಜೂರುಗೊಂಡ 5 ಲಕ್ಷ ರುಪಾಯಿ ಅನುದಾನದಲ್ಲಿ ತುಂಬೆ- ದೇಮುಂಡೆ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಉತ್ತಮ ರಸ್ತೆ, ಕುಡಿಯುವ ನೀರಿನ ಸೌಲಭ್ಯ, 24 ಗಂಟೆಗಳ ಕಾಲ ವಿದ್ಯುತ್ ವ್ಯವಸ್ಥೆ, ಆರೋಗ್ಯ ಸೌಲಭ್ಯ ಇಷ್ಟನ್ನು ಮಾತ್ರ ಜನಸಾಮಾನ್ಯರು ಸರ್ಕಾರದಿಂದ ಅಪೇಕ್ಷೆ ಮಾಡುತ್ತಾರೆ. ಈ ಕಲ್ಪನೆಯನ್ನಿಟ್ಟುಕೊಂಡೇ ಗ್ರಾಮಪಂಚಾಯತ್‍ಗಳು ಕೆಲಸ ನಿರ್ವಹಿಸ ಬೇಕು ಎಂದರು.
ತುಂಬೆ ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು, ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಪದ್ಮನಾಭ ಕೊಟ್ಟರಿ, ತಾ.ಪಂ.ಸದಸ್ಯೆ ಅನಿತಾ ಎಂ. ಪೂಜಾರಿ, ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ತುಂಬೆ ಪಂ. ಸದಸ್ಯ ಪ್ರವೀಣ್ ಡಿ. ತುಂಬೆ, ಪ್ರಮುಖರಾದ ಮನೋಜ್ ಆಚಾರ್ಯ ನಾಣ್ಯ, ಪ್ರವೀಣ್ ಶೆಟ್ಟಿ, ಮನೋಹರ ಶೆಟ್ಟಿ, ದಿನೆಶ್ ಶೆಟ್ಟಿ ಕೊಟ್ಟಿಂಜ, ಗಣೇಶ್ ತುಂಬೆ ಹಾಜರಿದ್ದರು.
