ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡಿನ ಮೂಲಕ ತೆರಳುವ ಮರಳು ತುಂಬಿದ ಲಾರಿಗಳನ್ನು ಶನಿವಾರ (ಇಂದು) ಬೆಳಿಗ್ಗೆ 8ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಬಂಟ್ವಾಳ ಕ್ಷೇತ್ರ ಬಿಜೆಪಿ ಕಾರ್ಯಕರ್ತರು ತಡೆಹಿಡಿಯಲಿದ್ದಾರೆಂದು ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆದ್ದಾರಿ ಮೂಲಕ ಅಕ್ರಮ ಮತ್ತು ಪರವಾನಿಗೆ ಹೊಂದಿರುವ ಮರಳು ಲಾರಿಗಳು ಅವ್ಯಾಹತವಾಗಿ ಸರತಿ ಸಾಲಿನಲ್ಲಿ ಸಂಚರಿಸುತ್ತಿರುವುದರಿಂದ ಬಿ.ಸಿ.ರೋಡಿನಲ್ಲಿ ಪ್ರತಿ ದಿನ ಟ್ರಾಫಿಕ್ ಜಾಮ್ ಉಂಟಾಗಿ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆಂದು ಅವರು ತಿಳಿಸಿದ್ದಾರೆ. ಮೇ ತಿಂಗಳು ಪೂತರ್ಿ ಮದುವೆ ಇನ್ನಿತರ ಶುಭ ಸಮಾರಂಭಗಳು ನಿರಂತರವಾಗಿರುವುದರಿಂದ ವಾಹನಗಳ ದಟ್ಟಣೆಯು ಹೆಚ್ಚಾಗುತ್ತಿದೆ.
ಈ ನಡುವೆ ಅವ್ಯಾಹತ ಮರಳು ಸಾಗಾಟದಿಂದ ಟ್ರಾಫಿಕ್ ಜಾಮ್ ತಪ್ಪುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರು ತಾಸುಗಟ್ಟಲೆ ಸಿಕ್ಕಿಹಾಕಿಕೊಂಡು ನಿಗಧಿತ ಸಮಯಕ್ಕೆ ತಲುಪಲು ಸಾದ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ಗಂಟೆಯವರೆಗೆ ರಾ.ಹೆದ್ದಾರಿ ಬಿ.ಸಿ.ರೋಡಿನ ಮೂಲಕ ಸಂಚರಿಸುವ ಮರಳು ಸಾಗಾಟದ ಲಾರಿಗಳನ್ನು ನಿರ್ಬಂಧಿಸಬೇಕೆಂದು ಸಂಬಂಧ ಪಟ್ಟ ಇಲಾಖೆಯನ್ನು ಒತ್ತಾಯಿಸಿರುವ ಅವರು ಇಂದು ಬಿಜೆಪಿ ಕಾರ್ಯಕರ್ತರು ಬಿ.ಸಿ.ರೋಡಿನಲ್ಲಿ ಸಾಂಕೇತಿಕವಾಗಿ ಮರಳು ಲಾರಿಯನ್ನು ತಡೆ ಹಿಡಿಯಲಿದ್ದಾರೆ. ಸಂಬಂಧ ಪಟ್ಟ ಇಲಾಖೆ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪಕ್ಷದ ಕಾರ್ಯಕರ್ತರೆ ಈ ಕೆಲಸ ಮಾಡಲಿದ್ದಾರೆಂದು ಜಿ. ಆನಂದ ಎಚ್ಚರಿಸಿದ್ದಾರೆ.
