ಬಜ್ಪೆ: ಇಬ್ಬರ ನಡುವೆ ಜಗಳವಾಗುತ್ತಿರುವುದನ್ನು ಕೇಳಲು ಹೋಗಿದ್ದಕ್ಕೆ ಕಾರ್ ಚಾಲಕನೋರ್ವ ಹಲ್ಲೆ ನಡೆಸಿದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕೆಂಜಾರು ವಿಮಾನನಿಲ್ದಾಣದ ಸಮೀಪದ ಆಗಮನ ದ್ವಾರದ ಸಮೀಪ ಎ.23ರ ತಡರಾತ್ರಿ ಸಂಭವಿಸಿದೆ.
ಮುಹಮ್ಮದ್ ರಫೀಕ್ ತನ್ನ ಕಾರಿನಲ್ಲಿ ತನ್ನ ಪತ್ನಿಯ ಜೊತೆ ತಂಗಿಯ ಗಂಡನನ್ನು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಿಡಲು ಹೋಗಿದ್ದರು. ಈ ವೇಳೆ ಕೆ.ಎ. 19 ಎನ್ 5898 ಎಂಬ ನಂಬ್ರದ ಕಾರ್ ಚಾಲಕ ಕೇರಳದ ನೋಂದಣಿಯಿದ್ದ ಕಾರ್ಗೆ ಅಡ್ಡವಿಟ್ಟು ಕಾರ್ ಚಾಲಕನ ಜೊತೆ ಜಗಳ ಕಾಯುತ್ತಿದ್ದನ್ನಲದೆ, ಆತನನ್ನು ಚೆನ್ನಾಗಿ ಬೈದು ಆತನ ಶರ್ಟ್ನ ಕಾಲರ್ ಪಟ್ಟಿ ಹಿಡಿದು ಹಲ್ಲೆ ನಡೆಸಲು ಮುಂದಾಗಿದ್ದ. ಈ ವೇಳೆ ಹಿಂದಿನ ಕಾರ್ನಲ್ಲಿದ್ದ ರಫೀಕ್ ಅವರು ಕೇರಳದ ಚಾಲಕನಿಗೆ ಹಲ್ಲೆ ನಡೆಸುತ್ತಿದ್ದ ಕಾರ್ ಚಾಲಕನಲ್ಲಿ ಯಾಕೆ ಗಲಾಟೆ ನಡೆಸುತ್ತೀರಿ ಎಂದು ಕೇಳಲು ಹೋದಾಗ, ಕಾರ್ ಚಾಲಕ `ಕೇರಳದವರಿಗೆ ಭಾರೀ ಸಪೋರ್ಟ್ ಮಾಡ್ತೀಯಾ?’ ಎಂದು ಅವರನ್ನು ವಿಮಾನ ನಿಲ್ದಾಣದ ದ್ವಾರದ ಕಡೆಗೆ ಎಳೆದೊಯ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮಗ್ಗ ಥಳಿಸಿದ್ದಾನೆ. ಅಲ್ಲದೆ ಅವರನ್ನು ಕೆಳಗಡೆ ದೂಡಿ ಹಾಕಿದ್ದು, ಕಬ್ಬಿಣದ ಪಂಚ್ನಿಂದ ಎಡಬದಿಯ ತುಟಿಗೆ ಗುದ್ದಿದ್ದೇ ಅಲ್ಲದೆ ಕೈ ಕಾಲುಗಳಿಗೆ ಹಲ್ಲೆ ನಡೆಸಿದ್ದಾನೆ ಎಂದು ರಫೀಕ್ ಅವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ
