ಮೂಲ್ಕಿ: ರಾಜ್ಯದ ಎಲ್ಲಾ ಠಾಣೆಗಳಲ್ಲೂ ಸಿಬ್ಬಂದಿಗಳ ಕೊರತೆ ಕಂಡು ಬಂದಿದ್ದು ಈಗಾಗಲೇ ಒಂದು ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಪೊಲೀಸ್ ಸಿಬ್ಬಂದಿಗಳ ನೇಮಕ ಆಗಲಿದ್ದು ಒಟ್ಟು 8200 ಸಿಬ್ಬಂದಿಗಳ ಅಗತ್ಯತೆಯನ್ನು ಪೂರೈಸಲು ಸರ್ಕಾರಕ್ಕೆ ಇಲಾಖೆ ಪ್ರಸ್ತಾವನೆ ಕಳುಹಿಸಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಹೇಳಿದರು.

ಅವರು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ಅಧಿಕಾರ ಪಡೆದ ನಂತರ ಎಲ್ಲಾ ಜಿಲ್ಲೆಗೂ ಭೇಟಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇನೆ ಕರಾವಳಿ ಭಾಗಕ್ಕೆ ತನ್ನ ಪ್ರಥಮ ಭೇಟಿ ಆಗಿದ್ದು ಇಲ್ಲಿ ಕಾನೂನು ರಕ್ಷಣೆಗೆ ಸ್ಥಳೀಯರ ಸಹಕಾರ ಬಹಳಷ್ಟು ಇದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ನಡೆಯುತ್ತಿರುವ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದೇನೆ. ಅಲ್ಲಲ್ಲಿ ಅಪಘಾತ ವಲಯಗಳನ್ನು ಗುರುತಿಸಿಕೊಂಡು ವಿಶೇಷ ಕಾರ್ಯಾಚರಣೆಯನ್ನು ನಡೆಸಲು ಸೂಚಿಸಿದ್ದೇನೆ ಎಂದರು.
ಇಲಾಖೆಯಲ್ಲಿ ಆಧುನಿಕತೆಯ ಶಿಕ್ಷಣಕ್ಕೆ ತಾನು ಎಲ್ಲಾ ಆದ್ಯತೆಯನ್ನು ನೀಡಿದ್ದು ಸರ್ಕಾರ ನೀಡುವ ಇತಿಮಿತಿಯಲ್ಲಿ ಅಪರಾಧ ಪ್ರಕರಣವನ್ನು ಹತ್ತಿಕ್ಕಲು ಇಲಾಖೆಗೆ ಎಲ್ಲಾ ವ್ಯವಸ್ಥಿತ ಶಸ್ತ್ರಾಸ್ತ್ರಗಳು ಸಾಕಷ್ಟಿದೆ. ಪೊಲೀಸ್ ವಸತಿ ಸಮುಚ್ಚಯಗಳ ದುಸ್ಥಿತಿಯನ್ನು ಅಧ್ಯಯನ ನಡೆಸಿದ್ದು ಇಲಾಖೆಯ ವಸತಿ ಗೃಹ ಎನ್ನುವ ವಿಶೇಷ ಯೋಜನೆಯಲ್ಲಿ ಇದನ್ನು ಪುನರ್ ನಿರ್ಮಾಣ ಅಥವ ದುರಸ್ಥಿ ಕಾರ್ಯಕ್ಕೆ ಜಿಲ್ಲಾ ಮಟ್ಟದಲ್ಲಿ ಹಂತ ಹಂತವಾಗಿ ಪ್ರಯತ್ನಿಸಲಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಶ್ಚಿಮ ವಲಯ ಐಜಿಪಿ ಅಮ್ರಿತ್ ಪಾಲ್, ಪಣಂಬೂರು ಎಸಿಪಿ ರವಿಕುಮಾರ್, ಕುಂದಾಪುರದ ಇನ್ಸ್ಪೆಕ್ಟರ್ ದಿವಾಕರ್, ಮೂಲ್ಕಿಯ ರಾಮಚಂದ್ರ ನಾಯಕ್ ಇದ್ದರು.
ದೇವಸ್ಥಾನದಲ್ಲಿ ಓಂಪ್ರಕಾಶ್ ಹಾಗೂ ಅಮ್ರಿತ್ ಪಾಲ್ರನ್ನು ವಿಶೇಷವಾಗಿ ಗೌರವಿಸಲಾಯಿತು. ಮೊಕ್ತೇಸರರಾದ ದುಗ್ಗಣ್ಣ ಸಾವಂತ ಅರಸು, ಎನ್.ಎಸ್.ಮನೋಹರ್ ಶೆಟ್ಟಿ, ನಾಗೇಶ್ ಬಪ್ಪನಾಡು, ಅರ್ಚಕ ಶ್ರೀಪತಿ ಆಚಾರ್ಯ, ಪ್ರಬಂಧಕ ಶಿವಶಂಕರ ವರ್ಮ ಇನ್ನಿತರರು ಇದ್ದರು.
