ಹೊಸದಿಲ್ಲಿ: ಭಾರತದ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾಂತ್ ಚೊಚ್ಚಲ ಬಾರಿ ಇಂಡಿಯನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಶನಿವಾರವಷ್ಟೇ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನ ಏರಿದ್ದ ಸೈನಾ, ರವಿವಾರ ನಡೆದ ಫೈನಲ್ನಲ್ಲಿ ಥಾಯ್ಲೆಂಡ್ನ ರಾಚನೋಕ್ ಇನ್ತಾನಾನ್ ಅವರನ್ನು 21-16, 21-14 ನೇರ ಸೆಟ್ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಿದರು. ಮತ್ತೂಂದೆಡೆ ಪುರುಷರ ವಿಭಾಗದ ಸಿಂಗಲ್ಸ್ ಫೈನಲ್ನಲ್ಲಿ ಭಾರತದ ಕೆ.ಶ್ರೀಕಾಂತ್, ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ಅವರನ್ನು 21-15, 12-21, 21-14 ಸೆಟ್ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡರು.
ಮ್ಯಾರಾಥಾನ್ ಹೋರಾಟದಲ್ಲಿ ಗೆದ್ದ ಶ್ರೀಕಾಂತ್: ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ಅವರನ್ನು 21-15, 12-21, 21-14 ಸೆಟ್ನಿಂದ ಸೋಲಿಸಿದ ಶ್ರೀಕಾಂತ್ ಇತಿಹಾಸ ನಿರ್ಮಿಸಿದರು. ಈ ಗೆಲುವು ಅವರಿಗೆ ಅಷ್ಟು ಸುಲಭದ್ದಾಗಿರಲಿಲ್ಲ. ಮೊದಲ ಸೆಟ್ನಲ್ಲಿ ಇಬ್ಬರ ನಡುವೆ ಹೆಡ್ ಟು ಹೆಡ್ ಫೈಟ್ ನಡೆಯಿತು. ಆದರೆ ಶ್ರೀಕಾಂತ್ ಚುರುಕಿನ ಆಟ ಪ್ರದರ್ಶಿಸಿ ಮೊದಲ ಸೆಟ್ ಅನ್ನು 21-15 ರಿಂದ ಗೆದ್ದರು. 1-0 ಮುನ್ನಡೆ ಸಾಧಿಸಿದರು. 2ನೇ ಗೇಮ್ನಲ್ಲಿ ತಿರುಗಿ ಬಿದ್ದ ಡೆನ್ಮಾರ್ಕ್ ಆಟಗಾರ ವಿಕ್ಟರ್ 12-21 ರಿಂದ ಪಂದ್ಯ ಗೆದ್ದು 1-1 ರಿಂದ ಸಮಸಾಧಿಸಿದರು. ಅಂತಿಮ ಹೋರಾಟ ರೋಚಕತೆ ಹೆಚ್ಚಿಸಿತು. ತೀವ್ರ ಹೋರಾಟದ ಪಂದ್ಯದಲ್ಲಿ ಶ್ರೀಕಾಂತ್ 21-14 ರಿಂದ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದರು

